ಎಂಸಿಎಯಿಂದ ಶೀಘ್ರ ಮಹಿಳೆಯರ ಚಾನೆಲ್!

ರಾಜ್ಯ ಸರ್ಕಾರದ ಜಾಹೀರಾತು ಸಂಸ್ಥೆಯಾದ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿ ಆ್ಯಂಡ್ ಎ) ಶೀಘ್ರ ಚಾನೆಲ್ ಆರಂಭಿಸಲಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಮೈಸೂರು: ರಾಜ್ಯ ಸರ್ಕಾರದ ಜಾಹೀರಾತು ಸಂಸ್ಥೆಯಾದ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿ ಆ್ಯಂಡ್ ಎ) ಶೀಘ್ರ ಚಾನೆಲ್ ಆರಂಭಿಸಲಿದೆ.

ವಿಧಾನಮಂಡಲದ ಕಲಾಪ ನೇರ ಪ್ರಸಾರದ ಜತೆಗೆ ಸರ್ಕಾರಿ ಕಾರ್ಯಕ್ರಮಗಳ ಪ್ರಸಾರಕ್ಕೂ ಆದ್ಯತೆ ನೀಡಲಿದೆ. ಈ ಚಾನೆಲ್ ಅನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವುದು ವಿಶೇಷ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಂಸಿ ಆ್ಯಂಡ್ ಎ ಅಧ್ಯಕ್ಷ ಎಲ್.ಎನ್. ಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರ ಲೋಕಸಭಾ ಹಾಗೂ ರಾಜ್ಯಸಭಾ ಕಲಾಪಗಳನ್ನು ಪ್ರಸಾರ ಮಾಡಲು ಆರಂಭಿಸಿರುವ ಚಾನೆಲ್‍ನಂತೆ ಈ ಚಾನೆಲ್ ಕೂಡ ಕಾರ್ಯನಿರ್ವಹಿಸಲಿದೆ. ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಚಾನೆಲ್ ಮೂಲಕ ಜನಸಾಮಾನ್ಯರಿಗೆ
ತಲುಪಿಸಲಾಗುವುದು. ಕಲೆ, ಸಂಸ್ಕೃತಿ, ಪ್ರವಾಸೋದ್ಯಮ, ಸಾಹಿತ್ಯದ ವಿಷಯಗಳನ್ನು ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ಈ ಚಾನೆಲ್ ಆರಂಭವಾದಲ್ಲಿ ವಿಧಾನಕಲಾಪಕ್ಕೆ ಖಾಸಗಿ ಚಾನೆಲ್‍ಗಳಿಗೆ ಪ್ರವೇಶ ನೀಡುವುದಿಲ್ಲವೇ? ಎಂದು ಕೇಳಿದಾಗ, ಈ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ. ಈ ಚಾನೆಲ್ ಆರಂಭ ಸಂಬಂಧ ಈಗಾಗಲೇ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಮುಂದಿನ ಬಜೆಟ್ ನಲ್ಲಿ ಅನುಮೋದನೆ ಸಿಗಲಿದೆ ಎಂದರು.

1972ರಲ್ಲಿ ಎಂಎಸ್‍ಐಎಲ್‍ನ ಅಂಗಸಂಸ್ಧೆಯಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧೀನದಲ್ಲಿ ಆರಂಭವಾದ ಎಂಸಿ ಆ್ಯಂಡ್ ಎ ಈಗ ಸ್ವತಂತ್ರ ಸಂಸ್ಥೆಯಾಗಿ, ಹೆಸರಾಂತ ಜಾಹೀರಾತು ಕಂಪನಿಯಾಗಿ ರೂಪುಗೊಂಡಿದೆ. ರು.5 ಲಕ್ಷ ಮೂಲ ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಈಗ ವಾರ್ಷಿಕ ರು.150 ಕೋಟಿ ವಹಿವಾಟು ನಡೆಸುತ್ತಿದೆ ಎಂದರು.

ಖಾಸಗಿ ಮಾರುಕಟ್ಟೆ ಪ್ರವೇಶ: ಬೆಂಗಳೂರಿನಲ್ಲಿ ಸ್ವಂತ ಕಚೇರಿ, ರಾಜ್ಯದ 12 ಕಡೆ, ದೆಹಲಿ ಹಾಗೂ ಮುಂಬೈನಲ್ಲಿ ಶಾಖಾ ಕಚೇರಿಗಳನ್ನು ಹೊಂದಿದೆ. ಇನ್ನು ಮುಂದೆ ಖಾಸಗಿ ಮಾರುಕಟ್ಟೆಗೂ ಕೂಡ ಪ್ರವೇಶಿಸಲಾಗುವುದು. ರಾಜ್ಯದ ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ಶಾಖಾ ಕಚೇರಿ ತೆರೆಯಲಾಗುವುದು.

ಇಡೀ ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸುವುದು, ವಾರ್ಷಿಕ ವಹಿವಾಟನ್ನು ಶೇ.15ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು. ದೇವನಹಳ್ಳಿ ಬಳಿ ಒಂದು ಎಕರೆ ಪ್ರದೇಶದಲ್ಲಿ ನೂತನ ಮುದ್ರಣಾಲಯ ಆರಂಭಿಸಲಾಗುವುದು. ಹಾಲಿ ಇರುವ 150 ಸಿಬ್ಬಂದಿಯ ಜತೆಗೆ ಇನ್ನೂ 140 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಈಗಾಗಲೇ ಅಬ್ಕಾರಿ ಇಲಾಖೆಯ ಲೇಬಲ್‍ಗಳನ್ನು ಮುದ್ರಿಸುತ್ತಿರುವ ಸಂಸ್ಥೆ ಮುಂದೆ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸುವ ಉದ್ದೇಶಹೊಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com