
ಬೆಂಗಳೂರು: ಪ್ರಥಮ ದರ್ಜೆ(ಎಫ್ ಡಿಎ) ಮತ್ತು ದ್ವಿತಿಯ ದರ್ಜೆ(ಎಸ್‍ಡಿಎ) ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಉತ್ತರಗಳ ಸೋರಿಕೆ ಸಂಬಂಧ ತನಿಖೆ ನಡೆಸುವಂತೆ ಸೋಮವಾರ ಹೈಕೋರ್ಟ್ ಸೂಚಿಸಿದೆ.
ಲಕ್ಷ್ಮಿನರಸಿಂಹಯ್ಯ, ಚಂದ್ರಯ್ಯ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ. ರವಿಮಳಿಮಠ ಅವರಿದ್ದ ನ್ಯಾಯಪೀಠ, ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಎಸ್ಸಿಗೆ ಮನವಿ ಸಲ್ಲಿಸಬೇಕು. ಮನವಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಆಹಾರ ಇಲಾಖೆ ಸೇರಿದಂತೆ ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಎಫ್ ಡಿಎ ಮತ್ತು ಎಸ್‍ಡಿಎ ಹುದ್ದೆಗಳಿಗೆ ಕೆಪಿಎಸ್‍ಸಿ ಅಕ್ಟೋಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಿತ್ತು. ಅಕ್ಟೋಬರ್ 4ರಂದು ನಡೆದ ಸಾಮಾನ್ಯ ಜ್ಞಾನ ಪರೀಕ್ಷೆಗೆ ಅಕ್ಟೋ-ಬರ್ 3ರಂದು ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳ ಪಟ್ಟಿ ಸೋರಿಕೆಯಾಗಿ, ವಾಟ್ಸಾಪ್‍ನಲ್ಲಿ ಹರಿದಾಡಿದ್ದವು ಎಂಬ ಆರೋಪವಿತ್ತು.
ಅಲ್ಲದೆ, ತುಮಕೂರಿನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದ ಆರೋಪದಡಿ ಒಬ್ಬನನ್ನು ಬಂಧಿಸಲಾಗಿತ್ತು. ಈ ಸಂಬಂಧ ಹಲವು ಜನ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ನಡೆಸಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಆದರೂ, ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಹಾಗಾಗಿ ಮರು ಪರೀಕ್ಷೆ ನಡೆಸುವುದಕ್ಕೆ ಕೆಪಿಎಸ್‍ಸಿ ಮತ್ತು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
Advertisement