ಅನಧಿಕೃತವಾಗಿ ಸಿನೆಮಾ ಪೋಸ್ಟರ್ ಅಂಟಿಸಬೇಡಿ

ನಗರದಲ್ಲಿ ಅನಧಿಕೃತವಾಗಿ ಚಲನಚಿತ್ರ ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಅಳವಡಿಸದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘದವರಲ್ಲಿ ಬಿಬಿಎಂಪಿ ಆಯುಕ್ತ ಜಿ.ಕುಮಾರನಾಯಕ್ ಮನವಿ ಮಾಡಿದ್ದಾರೆ...
ಬಿಬಿಎಂಪಿ ಆಯುಕ್ತ ಜಿ.ಕುಮಾರನಾಯಕ್
ಬಿಬಿಎಂಪಿ ಆಯುಕ್ತ ಜಿ.ಕುಮಾರನಾಯಕ್

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಚಲನಚಿತ್ರ ಪೋಸ್ಟರ್ ಮತ್ತು ಬ್ಯಾನರ್‍ಗಳನ್ನು ಅಳವಡಿಸದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ
ಸಂಘದವರಲ್ಲಿ ಬಿಬಿಎಂಪಿ ಆಯುಕ್ತ ಜಿ.ಕುಮಾರನಾಯಕ್ ಮನವಿ ಮಾಡಿದ್ದಾರೆ.

ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಪದಾಧಿಕಾರಿಗಳೊಂದಿಗೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಅನಧಿಕೃತ ಜಾಹೀರಾತು, ಪೋಸ್ಟರ್‍ಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಜೊತೆಗೆ, ಪಾಲಿಕೆಗೆ ಬರಬೇಕಾದ ಆದಾಯವೂ ಸರಿಯಾಗಿ ಪಾವತಿಯಾಗುತ್ತಿಲ್ಲ. ಹಾಗಾಗಿ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ವಿಶೇಷ ಆಯುಕ್ತ ವಿ.ರಶ್ಮಿ ಅವರು ಮಾತನಾಡಿ, ನಿರ್ಮಾಪಕರು ಹಾಗೂ ಚಿತ್ರಮಂದಿರ ಮಾಲೀಕರು ಪಾಲಿಕೆಯಿಂದ ಅನುಮತಿ ಪಡೆಯದೆ ಜಾಹೀರಾತು ಫಲಕಗಳನ್ನು ಅಳವಡಿಸುತ್ತಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿ ಪಾಲಿಕೆ ಅನುಮತಿ ಪಡೆಯಬೇಕು. `ಎ' ವಲಯದಲ್ಲಿ ಯಾವುದೇ ರೀತಿಯ ಜಾಹೀರಾತು ಫಲಕ ಅಳವಡಿಸಲು ಅವಕಾಶವಿಲ್ಲದಿದ್ದರೂ, ನಿಯಮ ಉಲ್ಲಂಘಿಸುತ್ತಿದ್ದಾರೆ. ಅನುಮತಿ ಪಡೆ ಯುವುದನ್ನು ಸರಳೀಕರಣಗೊಳಿಸಲು ಒಂದು ವಾರದೊಳಗೆ ಆನ್ ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ನಗರದ ಸೌಂದರ್ಯ ಕಾಪಾಡಲು ಚಿತ್ರರಂಗದಿಂದ ಸಂಪೂರ್ಣ ಸಹಕಾರವಿದೆ. ಆದರೆ, ಸಿನಿಮಾಗಳಿಗೆ ಸರಿಯಾದ ಪ್ರಚಾರ ಸಿಗದಿದ್ದರೆ, ಕೋಟ್ಯಾಂತರ ರುಪಾಯಿ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪಾಲಿಕೆಯಿಂದಲೇ ಪ್ರತಿ ವಾರ್ಡಿನಲ್ಲಿ 4 ರಿಂದ 5 ಹೋರ್ಡಿಂಗ್ಸ್‍ಗಳನ್ನು ಚಲನಚಿತ್ರಗಳಿಗೆ ಮೀಸಲಿಟ್ಟು, ಕಡಿಮೆ ದರದಲ್ಲಿ ನೀಡಬೇಕು ಎಂದು ಆಯುಕ್ತರಲ್ಲಿ ಮನವಿ ಮಾಡಿದರು. ಕಾಂಗ್ರೆಸ್ ಶಾಸಕ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com