ರಘು ಹೋರಾಟ ಈಗ ಬಳ್ಳಾರಿಗೆ ಶಿಫ್ಟ್

ಜಾತಿ ತಿಳಿಯದೆ ಪ್ರಮಾಣ ಪತ್ರ ಪಡೆಯಲು ಹೋರಾಟ ನಡೆಸುತ್ತಿರುವ ಮಂಡ್ಯದ ರಘು ಮತ್ತೆ ಸಮಸ್ಯೆಗೆ ಸಿಲುಕಿದ್ದಾನೆ. ಜಾತಿ ಪ್ರಮಾಣ ಪತ್ರದ ವಿಚಾರವಾಗಿ...
ಜಾತಿ ಪ್ರಮಾಣಪತ್ರ ಮತ್ತು ತಾಯಿಯ ಹೆಸರಿನ ದೃಢೀಕರಣಕ್ಕಾಗಿ ಅಲೆದಾಡುತ್ತಿರುವ ರಘು
ಜಾತಿ ಪ್ರಮಾಣಪತ್ರ ಮತ್ತು ತಾಯಿಯ ಹೆಸರಿನ ದೃಢೀಕರಣಕ್ಕಾಗಿ ಅಲೆದಾಡುತ್ತಿರುವ ರಘು

ಬೆಂಗಳೂರು: ಜಾತಿ ತಿಳಿಯದೆ ಪ್ರಮಾಣ ಪತ್ರ ಪಡೆಯಲು ಹೋರಾಟ ನಡೆಸುತ್ತಿರುವ ಮಂಡ್ಯದ ರಘು ಮತ್ತೆ ಸಮಸ್ಯೆಗೆ ಸಿಲುಕಿದ್ದಾನೆ.

ಜಾತಿ ಪ್ರಮಾಣ ಪತ್ರದ ವಿಚಾರವಾಗಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರಿಂದ ಸ್ಪಷ್ಟ ಭರವಸೆ ಪಡೆದು, ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಚೇರಿಯಲ್ಲಿ ತಾತ್ಕಾಲಿಕ ಡಿ ಗ್ರೂಪ್ ನೌಕರಿ ಗಿಟ್ಟಿಸಿದ ರಘು ಈಗ ಹುಟ್ಟಿದ ದಿನಾಂಕ ಮತ್ತು ತಾಯಿಯ ಹೆಸರಿನ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದ್ದಾನೆ.ಅದನ್ನು ಬಗೆಹರಿಸಿಕೊಳ್ಳಲು ಬಳ್ಳಾರಿಗೆ ಅಲೆಯುತ್ತಿದ್ದಾನೆ.

ಮಂಡ್ಯದ ಆರ್ ಟಿಒ ಕೊಳಗೇರಿಯಲ್ಲಿ ಭಿಕ್ಷೆ ಬೇಡುತ್ತಿದ್ದ 18 ವರ್ಷದ ಮಾನಸಿಕ ಅಸ್ವಸ್ಥೆ ಮತ್ತು ಮೂಗಿಗೆ ಜನಿಸಿದ ರಘುವಿಗೆ ಚಿಕ್ಕಂದಿನಿಂದ ತನ್ನ ಜಾತಿ ಯಾವುದೆಂದು ತಿಳಿದಿರಲಿಲ್ಲ. ಬಾಲಮಂದಿರದಲ್ಲಿ ಬೆಳೆದ ರಘುವನ್ನು ಸರ್ಕಾರವೇ ಸಾಕಿತು. ಯಾವುದೇ ಸಮಯದಲ್ಲೂ ಬಾಲಕನ ಜಾತಿ ದಾಖಲಾತಿಗಳಲ್ಲಿ ನಮೂದಾಗಿಲ್ಲ. ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಅಧ್ಯಯನ ಮಾಡಿದ ರಘು ಕೊನೆಗೂ ತನ್ನ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟರು. ತನಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ರಘು ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸಿದ್ದರು. ಸಮಾಜ ಕಲ್ಯಾಣ ಸಚಿವರು ಒಂದು ತಿಂಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡುವ ಭರವಸೆ ನೀಡಿದ್ದರು. ನಂತರ ವಿ.ಎಸ್.ಉಗ್ರಪ್ಪ ತಾತ್ಕಾಲಿಕವಾಗಿ ತಮ್ಮ ಕಚೇರಿಯಲ್ಲಿ ರಘುವಿಗೆ ಕೆಲಸವನ್ನೂ ನೀಡಿದ್ದರು.

ಈಗ ವಿಧಾನ ಪರಿಷತ್ತಿನಲ್ಲಿ ಡಿ ಗ್ರೂಪ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ಸಾಮಾನ್ಯ ಹುದ್ದೆ ಖಾಲಿ ಇದ್ದು ಅದಕ್ಕೆ ಅರ್ಜಿ ಸಲ್ಲಿಸಲು ರಘು ಮುಂದಾದಾಗ ಮೂಲ ದಾಖಲಾತಿಯಲ್ಲಿ ಹಲವು ಲೋಪವಾಗಿರುವುದು ಗೊತ್ತಾಗಿದೆ. ತಾನು 1ರಿಂದ 9ನೇ ತರಗತಿವರೆಗೆ ಬಳ್ಳಾರಿ ಜಿಲ್ಲೆಯ ನಾಲ್ಕು ಶಾಲೆಗಳಲ್ಲಿ ಓದುವಾಗ ಈ ಎಡವಟ್ಟು ನಡೆದಿದೆ. ಅಂದರೆ ಮೂಲ ದಾಖಲಾತಿ ಪ್ರಕಾರ ಜನ್ಮದಿನಾಂಕ 21.1.1991 ಎಂದಿದ್ದರೆ, ಶಾಲಾ ದಾಖಲಾತಿಯಲ್ಲಿ 15.6.1991 ಎಂದು ಉಲ್ಲೇಖವಾಗಿದೆ. ಹಾಗೆಯೇ ತಾಯಿಯ ಹೆಸರು ಕೆಲವು ದಾಖಲೆಗಳಲ್ಲಿ ಮೂಗಿ ಎಂದಿದ್ದರೆ ಕೆಲವು ಕಡೆ ಮಮತಾ ಎಂದು ದಾಖಲಿಸಲಾಗಿದೆ.
ಡಿ ಗ್ರೂಪ್ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ 7ನೇ ತರಗತಿಯ ವರ್ಗಾವಣೆ ಪತ್ರದ ನಕಲು ಪ್ರತಿಯನ್ನು ಸಲ್ಲಿಸಬೇಕಾದ್ದರಿಂದ ಈ ಪತ್ರದಲ್ಲಿ ಲೋಪವಿರುವುದು ಕಂಡು ಬಂದಿದೆ. ಇಷ್ಟು ದಿನ ಜಾತಿಗಾಗಿ ಹೋರಾಟ ಮಾಡಿ ವಿಧಾನಸೌಧದವರೆಗೂ ಬಂದಿದ್ದ ರಘು ಈಗ ತನ್ನ ಹುಟ್ಟಿದ ದಿನಾಂಕ ಮತ್ತು ತಾಯಿ ಹೆಸರಿನ ಸ್ಪಷ್ಟೀಕರಣಕ್ಕೆ ಬಳ್ಳಾರಿಗೆ ತೆರಳುತ್ತಿದ್ದಾನೆ.
ತಾಯಿ ನೋಡಲು 24 ವರ್ಷ ಬೇಕಾಯಿತು!

ಮಂಡ್ಯದ ಆರ್ ಟಿಒ ಕೊಳಗೇರಿಯಲ್ಲಿ ಭಿಕ್ಷೆ ಬೇಡುತ್ತಿದ್ದ 18 ವರ್ಷದ ಮಾನಸಿಕ ಅಸ್ವಸ್ಥೆ ಮತ್ತು ಮೂಗಿ ಮೇಲೆ 1990ರಲ್ಲಿ ಅಪರಿಚಿತರು ಅತ್ಯಾಚಾರವೆಸಗಿದ್ದರು. ಆಕೆಗೆ ಜನಿಸಿದ ಮಗುವೆ ಈ ರಘು. ಆರಂಭದಲ್ಲಿ ತಾಯಿ ಮತ್ತು ಮಗುವನ್ನು ಸ್ವೀಕಾರ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಆತ ಬೆಳೆದು ದೊಡ್ಡವನಾದಂತೆ ಬಾಲಮಂದಿರಕ್ಕೆ ಸೇರಿಸಲಾಯಿತು.
ಆಶ್ಚರ್ಯವೆಂದರೆ ತಾಯಿ ಮತ್ತು ಮಗುವನ್ನು ಪ್ರತ್ಯೇಕವಾಗಿ ಬೆಳೆಸಲಾಯಿತು. ಹೀಗಾಗಿ ರಘು ಹುಟ್ಟಿದ ನಂತರ ಕೆಲವೇ ವರ್ಷಗಳವರೆಗೆ ತಾಯಿ ಬಳಿ ಇದ್ದ. ಬಳಿಕ ಸರ್ಕಾರ ನಡೆಸುವ ಬಾಲಮಂದಿರದಲ್ಲಿ ಬೆಳೆದ. ಈ ವೇಳೆ ರಘುವಿಗೆ ತಾಯಿಯ ಬಗ್ಗೆ ಯಾರೂ ತಿಳಿಸಲಿಲ್ಲ. ಹೀಗೆ ಒಂದು ದಿನ ತನಗೆ ಸಂಬಂಧಿಸಿದ ದಾಖಲಾತಿಯನ್ನು ನೋಡುತ್ತಿರುವಾಗ ತಾಯಿ ಬದುಕಿರುವುದನ್ನು ತಿಳಿದುಕೊಂಡ ರಘು 8 ತಿಂಗಳ ಹಿಂದೆ ಕಲಬುರ್ಗಿಗೆ ತೆರಳಿ ತಾಯಿಯನ್ನು ಗುರುತಿಸಿ ನೋಡಿ ಬಂದಿದ್ದ. ತನಗೆ 25 ವರ್ಷವಾಗಿದ್ದರೂ ತಾಯಿ ನೋಡಲು ರಘು ತೆಗೆದುಕೊಂಡ ಸಮಯಾವಕಾಶ ಬರೋಬ್ಬರಿ 24 ವರ್ಷ 4 ತಿಂಗಳು.

ಇಷ್ಟಾದರೂ ಕಲಬುರ್ಗಿಯಲ್ಲಿ ಎರಡು ಬಾರಿ ಹಾಗೂ ಮೈಸೂರಿನಲ್ಲಿ ಎರಡು ಬಾರಿ ಮಾತ್ರ ತಾಯಿಯನ್ನು ನೋಡಿದ್ದಾನೆ ರಘು.(ಸರ್ಕಾರವು ವೈದ್ಯಕೀಯ ಚಿಕಿತ್ಸೆಯ ದೃಷ್ಟಿಯಿಂದ ರಘುವಿನ ತಾಯಿಯನ್ನು ಆಗಾಗ ಬೇರೆ ಬೇರೆ ಕಡೆ ಇರುವ ಸ್ವೀಕಾರ ಕೇಂದ್ರಕ್ಕೆ ವರ್ಗಾಯಿಸುತ್ತಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com