ಭಾರತದಲ್ಲಿ ಅಭಿವೃದ್ಧಿ ಎಂಬುದೇ ಜೋಕ್

ನಮ್ಮ ದೇಶದಲ್ಲಿ ಅಭಿವೃದ್ದಿ ಎಂಬುದು ಜೋಕ್. ಅಭಿವೃದ್ಧಿಗೂ ಸ್ವಾತಂತ್ರ್ಯ ಇರಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ...
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ
ಬೆಂಗಳೂರು:  ನಮ್ಮ ದೇಶದಲ್ಲಿ ಅಭಿವೃದ್ದಿ ಎಂಬುದು ಜೋಕ್. ಅಭಿವೃದ್ಧಿಗೂ ಸ್ವಾತಂತ್ರ್ಯ ಇರಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ  ಅಭಿಪ್ರಾಯಪಟ್ಟರು.
ಆವಿಷ್ಕಾರ  ಸಂಸ್ಥೆ ನನಗರದಲ್ಲಿ ಭಾನುವಾರ ಆಯೋಜಿಸಿದ್ದ 20 ನೇ ಬೀದಿ ನಾಟಕೋತ್ವ ಅಂಗವಾಗಿ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈಪುರ ಸಾಹಿತ್ಯೋತ್ಸವದಲ್ಲಿ ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಒಂದು ಜೋಕ್ ಎಂದು ಹೇಳಿದ್ದರು. ಆದರೆ ಅದನ್ನು ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ. ನಮ್ಮ ದೇಶದಲ್ಲಿ ಅಭಿವೃದ್ಧಿಗೆ ಪೂರಕವಾದ ಸ್ವಾತಂತ್ರ್ಯ ಇಲ್ಲ. ಏಕೆಂದರೆ ರೈತರ ಅನುಮತಿ ಇಲ್ಲದೆ ಭೂಮಿಯನ್ನು  ಕಿತ್ತುಕೊಳ್ಳುವುದು ಅಭಿವೃದ್ಧಿಯೇ ಅಲ್ಲ. ಹೀಗಾಗಿ ಅಭಿವೃದ್ಧಿ ವಲಯದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು ಎಂದರು. 
ರೈತಾಪಿ ಮತ್ತು ಶ್ರಮಿಕ ವರ್ಗ ಭೂಮಿಯನ್ನು ಆರಾದಿಸುತ್ತಾರೆ. ಬಂಡವಾಳ ಶಾಹಿ ವರ್ಗ ಭೂಮಿಯನ್ನು ಕಾಮಿಸುತ್ತಾರೆ. ಭೂ ಆರಾಧಕರನ್ನು ತುಳಿದು ಭೂಕಾಮಿಗಳನ್ನು ರಕ್ಷಣೆ ಮಾಡಿ ಮೇಲೆತ್ತುವ ಆರ್ಥಿಕ ವ್ಯವಸ್ಥೆ ನಮ್ಮ ದೇಶದಲ್ಲಿದೆ ಎಂದರು.  ಭೂಮಿ ಮಕ್ಕಳಿಂದ ಹುಟ್ಟಿದ ಕಲೆಯೇ  ರಂಗಭೂಮಿ. ಬೇರೆ ಕಲಾಪ್ರಕಾರಗಳಿಗೆ ಇಲ್ಲದ ಭೂಮಿ ಎಂಬ ಪ್ರತ್ಯಯ ರಂಗ ಭೂಮಿಗೆ ಬಂದಿದೆ. ಇಲ್ಲಿ ಅಕ್ಷರಸ್ಥರು, ಅನಕ್ಷರಸ್ಥರು ಎಲ್ಲರೂ ಒಳಗೊಳ್ಳುತ್ತಾರೆ ಎಂದು ತಿಳಿಸಿದರು.  ಹೈದ್ರಾಬಾದ್ ವಿವಿಯ ವಿದ್ಯಾರ್ಥಿ  ರೋಹಿತ್ ವೇಮುಲ ಸಾವಿನ ಪ್ರಕರಣದಲ್ಲಿ ಜಾತಿ ರಾಜಕೀಯ ಮಾಡುತ್ತಿರುವುದು ಶೋಚನೀಯ ಎಂದರು. ವೇಮುಲ ದಲಿತ ಜಾತಿಗೆ ಸೇರಿದವರೋ ಅಲ್ಲವೋ ಎಂಬ ಚರ್ಚೆ ನಡೆಯುತ್ತಿದೆ. ಆದರೆ ದಲಿತ ಹಿಂದುಳಿದ ವರ್ಗ ಮೇಲ್ಜಾತಿಯನ್ನು ಮೀರಿ ಒಂದು ಜೀವ ಹೋಗಿದೆ ಎಂಬ ಯೋಚನೆ ಯಾರಿಗೂ ಇಲ್ಲ. ಇಲ್ಲಿ ಸರ್ಕಾರಿ ಪ್ರಾಯೋಜಿತ ಜಾತಿ ರಾಜಕೀಯ ನಡೆಯುತ್ತಿದೆ. ಮನೆಯಲ್ಲಿದ್ದ ರೋಹಿತ್ ಕುಟುಂಬವನ್ನು ಬೀದಿಗೆ ತಂದಿರುವುದು ವಿಷಾದನೀಯ ಎಂದರು. ಸರ್ಕಾರಗಳು ಎಡ, ಬಲ ಪಂಥೀಯ ಸಿದ್ಧಾಂತ ಬಿಟ್ಟು ಜೀವ ಪಂಥೀಯವಾಗಿರಬೇಕು ಎಂದು ತಿಳಿಸಿದರು. 
ಆವಿಷ್ಕಾರ ಸಂಸ್ಥೆಯ ಸಂಚಾಲಕ ಬಿ. ಆರ್ ಮಂಜುನಾಥ್, ರೋಹಿತ್ ಸಾವಿನ ಕುರಿತು ಗೊತ್ತುವಳಿ ಮಂಡಿಸಿದರು. ರೋಹಿತ್ ಸಾವಿನ ಪ್ರಕರಣವನ್ನು ತನಿಥೆ ನಡೆಸಿ  ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು , ಸಹಿಷ್ಣುತೆಗೆ ಭಂಗ ತರುವ ಶಕ್ತಿಗಳನ್ನು ಮಟ್ಟಹಾಕಬೇಕು. 
ಹೈದ್ರಾಬಾದ್‌ನ ವಿವಿಯ ಕುಲಪತಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಹೆಚ್. ಜಿ ವಿಜಯಲಕ್ಷ್ಮಿ ಮತ್ತಿತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com