ಜಾತ್ಯತೀತ ಪದ ಬಳಸಿದರೇ ಲೇವಡಿ

ಇಂದು ಜಾತ್ಯತೀತ ಎನ್ನುವ ಪದ ಉಪಯೋಗಿಸಿದರೆ ಲೇವಡಿಗೆ ಒಳಗಾಗುವ ಪರಿಸ್ಥಿತಿ ಇದೆ. ಇದು ಹೀಗೇ ಮುಂದುವರಿದರೆ ಪ್ರಜಾಪ್ರಭುತ್ವವೇ ನಾಶವಾಗುವ ದಿನ ದೂರ ಉಳಿದಿಲ್ಲ ಎಂದು ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಆತಂಕ ವ್ಯಕ್ತಪಡಿಸಿದರು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು; ಇಂದು ಜಾತ್ಯತೀತ ಎನ್ನುವ ಪದ ಉಪಯೋಗಿಸಿದರೆ ಲೇವಡಿಗೆ ಒಳಗಾಗುವ ಪರಿಸ್ಥಿತಿ ಇದೆ. ಇದು ಹೀಗೇ ಮುಂದುವರಿದರೆ ಪ್ರಜಾಪ್ರಭುತ್ವವೇ ನಾಶವಾಗುವ ದಿನ ದೂರ ಉಳಿದಿಲ್ಲ ಎಂದು ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಆತಂಕ ವ್ಯಕ್ತಪಡಿಸಿದರು.

ನಗರದ ಹಡ್ಸನ್ ವೃತ್ತದ ಬಳಿಯ ಎಸ್ ಸಿಎಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯೋತ್ತರ ಭಾರತ-ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತಿಗತಿಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಇಂದು ದೇಶವನ್ನು ಎರಡು ಅಪಾಯಗಳು ಕಾಡುತ್ತಿವೆ. ಒಂದು ಏಕಮುಖಿ ಸಂಸ್ಕೃತಿಯ ಹೇರುವಿಕೆ ಮತ್ತೊಂದು ಫ್ಯಾಸಿಸ್ಟ್ ವಾದ ಅಪಾಯ ಎಂದರು.

ಭಿನ್ನ ಸಂಸ್ಕೃತಿಗಳ ಭಾರತದಲ್ಲಿ ನಾನಾ ಧರ್ಮಗಳ ಜನ ಅನ್ಯೋನ್ಯವಾಗಿ ನಲೆಸಿದ್ದಾರೆ. ಮುಸ್ಲಿಮರೇ ಇಲ್ಲದ ಹಳ್ಳಿಗಳಲ್ಲೂ ಮೊಹರಂ ಆಚರಿಸುವ ಸೌಹಾರ್ದತೆ ನಮ್ಮ ದೇಶದಲ್ಲಿದೆ. ಇಂತಹ ಬಹುಮುಖಿ ಸಂಸ್ಕೃತಿಯನ್ನು ನಾಶ ಮಾಡಿ, ಏಕಮುಖಿ ಸಂಸ್ಕೃತಿ ಹೇರುವುದು ಕೋಮುವಾದಿ ಆರ್ ಎಸ್ಎಸ್ ಧ್ಯೇಯವಾಗಿದೆ. ಇದನ್ನು ಗೋಲ್ವಾಲ್ಕರ್ ಮತ್ತು ಸಾವರ್ಕರ್ ಸ್ಪಷ್ಟವಾಗಿಯೇ ಹೇಳಿದ್ದಾರೆ. ಆರ್ ಎಸ್ಎಸ್ ಪ್ರಚಾರಕರಾಗಿದ್ದ ನರೇಂದ್ರ ಮೋದಿ ಇಂದು ಪ್ರಧಾನಿಯಾಗಿದ್ದಾರೆ.

ಭಾರವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿರುವ ಹುನ್ನಾರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕರಾವಳಿಯಲ್ಲಿ ಹಿಂದೂ-ಮುಸ್ಲಿಂ ಸಮುದಾಯಕ್ಕೆ ಸೇರಿದವರು ಪರಸ್ಪರ ಮಾತನಾಡಿದರೂ ಹಲ್ಲೆಗೆ ಒಳಗಾಗುವ ಪರಿಸ್ಥಿತಿಯಿದೆ. ಧರ್ಮದ ಆಧಾರತ ಮೇಲೆ ಜನರನ್ನು ಒಡೆಯುವ, ನೈಜ ಸಮಸ್ಯೆಗಳಿಂದ ಜನರನ್ನು ವಿಮುಖಗೊಳಿಸಿ, ಕೋಮು ಉನ್ಮಾದದಲ್ಲಿ ಮುಳುಗಿಸುವ ಆರ್ ಎಸ್ಎಶ್ ನಂತಹ ಕೋಮು ಸಂಘಟನೆಗಳ ಅಗತ್ಯ ಭಾರತದ ಬಂಡವಾಳ ಶಾಹಿಗಳಿಗೆ ಇದೆ ಎಂದು ವಿಷಾದಿಸಿದರು. ಆವಿಷ್ಕಾರ ರಾಜ್ಯ ಸಮಿತಿ ಸಂಚಾಲಕ ಡಾ.ಬಿ.ಆರ್. ಮಂಜುನಾಥ್, ಬಿ.ದೇಸಾಯಿ ಉಪಸ್ಥಿತರಿದ್ದರು.

ಬಾವು-ನೇತಾಜಿ ಭಿನ್ನಾಭಿಪ್ರಾಯ
ಸ್ವಾತಂತ್ರ್ಯ ಸಂಗ್ರಾಮದ ನೇತಾರರಾದ ಗಾಂಧೀಜಿ ಮತ್ತು ನೇತಾಜಿಯವರ ನಡುವೆ ಮೂಲಭೂತವಾದ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇತ್ತು. ಗಾಂಧೀಜಿ ಅಪ್ಪಟ ಪ್ರಾಮಾಣಿಕರಾಗಿದ್ದರೂ ಮತ್ತು ಎಲ್ಲ ಧರ್ಮದವರನ್ನು ಪ್ರೀತಿಸುತ್ತಿದ್ದರು. ಆಧರೆ, ಅವರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡು, ಸುಧಾರಣಾವಾದಿ ಮಾರ್ಗ ಅನುಸರಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಧರ್ಮವನ್ನು ಬೆರೆಸಿದರು. ಆದರೆ, ಅಪ್ಪಟ ಕಾಳಿ ಭಕ್ತರಾಗಿದ್ದ ನೇತಾಜಿ ಯಾವುದೇ ರಾಜಿ ಮಾಡಿಕೊಳ್ಳದೆ, ಕ್ರಾಂತಿಕಾರಿ ವಿಧಾನ ಅನುಸರಿಸಿದರು ಮತ್ತು ತಮ್ಮ ಹೋರಾಟದಲ್ಲಿ ಸಂಪೂರ್ಣವಾಗಿ ಧರ್ಮವನ್ನು ದೂರಕ್ಕಿಟ್ಟು, ಧರ್ಮ ನಿರಪೇಕ್ಷತೆಯನ್ನು ಅಕ್ಷರಶಃ ಪಾಲಿಸಿದರು ಎಂದು ಶಿಕ್ಷಣ ತಜ್ಞ ಕೆ. ರಾಧಾಕೃಷ್ಣ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com