
ಬೆಂಗಳೂರು: ಮಹಿಳೆಯರಿಗೆ ದೇಗುಲ ಪ್ರವೇಶ ಮಾಡದಂತೆ ನಿಷೇಧ ಹೇರುವುದು ಸರಿಯಲ್ಲ ಎಂದು ಮಾಜಿ ಸಂಸದೆ ಪ್ರಿಯಾದತ್ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಹಿಂದೂ, ಮುಸ್ಲಿಂ ಸೇರಿದಂತೆ ಯಾವುದೇ ಸಮುದಾಯವಾದರೂ ಹೆಣ್ಣು ಗಂಡಿನ ನಡುವೆ ಸಮಾನತೆ ಇರಬೇಕು. ನಮ್ಮ ದೇವರ ಪ್ರಾರ್ಥನೆಗೆ ನಮ್ಮ ಶ್ರದ್ಧಾ ಕೇಂದ್ರಗಳಿಗೆ ಹೋಗಬಾರದು ಎಂದರೆ ಹೇಗೆ. ಇದಕ್ಕೆಲ್ಲ ಸಂಪ್ರದಾಯಗಳ ನೆಪ ಹೇಳುವುದು ಸರಿಯಲ್ಲ ಎಂದು ಹೇಳಿದರು.
ಈಗಾಗಲೇ ನಾವು ಬಾಲ್ಯ ವಿವಾಹ, ಸತಿ ಪದ್ಧತಿಯಂತಹಾ ಸಂಪ್ರದಾಯಗಳನ್ನು ಬಿಟ್ಟಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು, ಸಂಪ್ರದಾಯಗಳೂ ಬದಲಾಗಬೇಕು ಎಂದು ತಿಳಿಸಿದರು.
ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಮತ್ತು ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ಶೋಷಣೆಯ ಪ್ರತೀಕವಾಗಿವೆ. ಸಂಸ್ಕೃತಿ ವಿಚಾರದಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ವ್ಯವಹರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
Advertisement