ಬಾಗಲಕೋಟೆ: ಹಜರತ್ ಮಹಮ್ಮದ್ ಪೈಗಂಬರರ ಜನ್ಮ ದಿನಾಚರಣೆ ನಿಮಿತ್ತ ನಗರದಲ್ಲಿ ಮುಸ್ಲಿಂ ಬಾಂಧವರು ಶುಕ್ರವಾರ ಆಕರ್ಷಕ ಮೆರವಣಿಗೆ ನೆಡೆಸಿದರು.
ನಗರದ ಹಳೆ ಅಂಜುಮನ್ ಸಂಸ್ಥೆಯ ಆವರಣದಿಂದ ಪ್ರಾರಂಭಗೊಂಡ ಮೆರವಣಿಗೆಯು ಕಿಲ್ಲಾ, ಹಳೆ ಪೋಸ್ಟ್ ಕಚೇರಿ, ವಲ್ಲಭಭಾಯಿ ವೃತ್ತ, ಎಂ.ಜಿ. ರಸ್ತೆ, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ ರಸ್ತೆ, ರೇಲ್ವೆ ಸ್ಟೇಶನ್, ಬಿಲಾಲ ಮಸೀದಿ, ದುರ್ಗಾವಿಹಾರ, ಶಕ್ತಿ ಟಾಕೀಜ, ತರಕಾರಿ ಮಾರುಕಟ್ಟೆ ಮುಖಾಂತರ ಮತ್ತೆ ಪಂಕಾ ಮಸೀದಿ ಬಳಿ ಸಂಪನ್ನವಾಯಿತು.
ಮೆರವಣಿಗೆ ಉದ್ದಕ್ಕೂ ಮುಸ್ಲಿಂ ಬಾಂಧವರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ದೊಡ್ಡವರು, ಚಿಕ್ಕವರು ಎಂಬ ಭೇದ ಭಾವವಿಲ್ಲದೆ ಮೆರವಣಿಗೆಯಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಇದ್ಕಕೂ ಮುನ್ನ ಅಂದರೆ ಜ. 24ರಂದು ನವನಗರದ ಅಂಜುಮನ್ ಹೈಸ್ಕೂಲ್ ಆವರಣದಲ್ಲಿ ಅರೇಬಿಕ, ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದಿವ್ಯ ಕುರಾನ, ತಿಲಾವತ್ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು, ಸಂಜೆ ಬಾಗಲಕೋಟೆಯಿಂದ ಪವಿತ್ರ ಹಜ್ ಯಾತ್ರೆ ಮುಗಿಸಿ ಬಂದ ಮಹಿಳೆಯರಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೆರವಣಿಗೆಯಲ್ಲಿ ಅಧ್ಯಕ್ಷ ಜಾಕೀರಹುಸೇನ ಮೋಕಾಶಿ, ಉಪಾಧ್ಯಕ್ಷ ಅಯ್ಯೂಬಸಾಬ ಪುನೇಕಾರ, ಕಾರ್ಯದರ್ಶಿ ಕುತುಬುದ್ದೀನ ಖಾಜಿ, ಜಿ.ಎಂ. ಟಂಕಸಾಲಿ, ನೂರಸಾಬ ಮಂಗಳೂರ, ಜಾಫರಸಾಬ ಬೇಫಾರಿ, ರಪೀಕಸಾಬ ಲೋಕಾಪೂರ, ಮಹ್ಮದ ರಫೀಕ ಮುಲ್ಲಾ, ನೂರಸಾಬ ಪಟ್ಟೇವಾಲೆ, ಶಫೀಕ ಜಮಾದಾರ, ಅಲೀಮ ಬಾಗೇವಾಡಿ, ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಸಲೀಂ ಮೊಮೀನ, ಕಾಂಗ್ರಸ್ ಮುಖಂಡ ಎಚ್.ವೈ. ಮೇಟಿ, ಜೆಡಿಎಸ್ ಮುಖಂಡ ಸಂಗನಗೌಡ ಜಕ್ಕನಗೌಡರ ಸೇರಿದಂತೆ ಇನ್ನಿತರರು ಇದ್ದರು.