ಬಾಗಲಕೋಟೆಗೆ ಬಯಲುಸೀಮೆ ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿ

Updated on

ಬಾಗಲಕೋಟೆ: ಚಿತ್ರದುರ್ಗ ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಇದೀಗ ಮತ್ತೆರೆಡು ಪ್ರಾದೇಶಿಕ ಕಚೇರಿಗಳನ್ನು ಹೊಂದಲಿದೆ.
ಯೋಜನಾ ಖಾತೆ ಸಚಿವ ಎಸ್.ಆರ್.ಪಾಟೀಲ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ನಿರ್ಣಯಕ್ಕೆ ಬರಲಾಗಿದೆ. ಮಂಡಳಿ ವ್ಯಾಪ್ತಿಯ ಕೆಲಸಗಳನ್ನು ಚುರುಕುಗೊಳಿಸಲು ಪ್ರಾದೇಶಿಕ ಕಚೇರಿ ಅಗತ್ಯತೆ ಸಭೆಯಲ್ಲಿ ಬಲವಾಗಿ ಪ್ರಸ್ತಾಪವಾಗಿದೆ. ಅಂತಿಮವಾಗಿ ಬಾಗಲಕೋಟೆ ಹಾಗೂ ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಾದೇಶಿಕ ಕಚೇರಿ ಆರಂಭಿಸುವುದಕ್ಕೆ ಸಭೆ ಒಪ್ಪಿಗೆ ನೀಡಿದೆ.
ಬಾಗಲಕೋಟೆ, ಚಿತ್ರದುರ್ಗ, ರಾಮನಗರ, ಬೆಳಗಾವಿ, ತುಮಕೂರು,ಬೆಂಗಳೂರು ಗ್ರಾಮಾಂತರ ಸೇರಿದಂತೆ ಒಟ್ಟು 14 ಜಿಲ್ಲೆಗಳ 57 ವಿಧಾನಸಭೆ ಕ್ಷೇತ್ರ, 14 ಮಂದಿ ಎಂಪಿ, 24 ಮಂದಿ ಎಂಎಲ್ಸಿ ಹಾಗೂ 14 ಮಂದಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ವ್ಯಾಪ್ತಿ ಹೊಂದಿರುವ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅನುದಾನದ ಕೊರತೆಯಿಂದ ಬಸವಳಿದಿದ್ದು 2014-15 ನೇ ಸಾಲಿಗೆ ಅರ್ಧ ಸ್ಪಿಲ್ ಓವರ್ (ಮುಂದುವರಿದ ಕಾಮಗಾರಿ), ಉಳಿದರ್ಧ ನವೀನ ಎನ್ನುವಂತಾಗಿದೆ.
ಹೆಸರಿಗೆ ಮಾತ್ರ...: ಬಯಲು ಸೀಮೆ ಪ್ರದೇಶದಲ್ಲಿ ಜಲಸಂಪನ್ಮೂಲಗಳ ಅಭಿವೃದ್ಧಿ ಮತ್ತು ಸಂರಕ್ಷಣೆ, ಭೂ ಸಾರ ಸಂರಕ್ಷಣೆ, ಅರಣ್ಯಾಭಿವೃದ್ಧಿ, ತೋಟಗಾರಿಕೆ, ಪಶು ಸಂಗೋಪನೆ ಹಾಗೂ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವುದು ಮಂಡಳಿಯ ಪ್ರಮುಖ ಉದ್ದೇಶ. ಆದರೆ 14 ಜಿಲ್ಲೆಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಮಂಡಳಿಗೆ ಸರ್ಕಾರ ಕಾಯ್ದಿರಿಸಿರುವ ಅನುದಾನ ಮಾತ್ರ ಕೇವಲ ರು. 20 ಕೋಟಿ. ಪ್ರತಿ ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅರ್ಧ ಕೋಟಿಯಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲು ಕೂಡಾ ಸಾಧ್ಯವಾಗುತ್ತಿಲ್ಲ. ಬಯಲು ಸೀಮೆ ಹೆಸರಲ್ಲಿ ಒಂದು ಮಂಡಳಿ ಇರಬೇಕೆಂಬ ಕಾರಣಕ್ಕೆ ಸರ್ಕಾರ ಸ್ಥಾಪಿಸಿದೆಯೋ ಎಂಬ ಭಾವನೆಗಳು ಮೂಡುತ್ತವೆ.
ಮಂಡಳಿ ಕ್ರಿಯಾ ಯೋಜನೆ ರೂಪಿಸುವಾಗ ಶೇಕಡಾ 60ರ ಅನುದಾನಕ್ಕೆ  ಕಡಿಮೆ ಇಲ್ಲದಂತೆ  ಅಂತರ್ಜಲ ಹಾಗೂ ಕೃಷಿ ಸಂಬಂಧಿಸಿದ ಚಟುವಟಿಕೆಗೆ ಪ್ರಾಧಾನ್ಯತೆ ನೀಡಲಾಗುತ್ತದೆ. ಉಳಿದ 40 ರಷ್ಟು ಅನುದಾನ ಎಂದಿನಂತೆ ರಸ್ತೆ,  ಸೇತುವೆ, ಕಟ್ಟಡಗಳ ಪಾಲಾಗುತ್ತದೆ. ಮಂಡಳಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ನಬಾರ್ಡ್ ಅಲ್ಪ ಪ್ರಮಾಣದ ನೆರವು ನೀಡುತ್ತಿತ್ತು. ಆದರೆ 2014-15 ನೇ ಸಾಲಿಗೆ ನೆರವು ಸ್ಥಗಿತವಾಗಿದೆ. ಹಾಗಾಗಿ ಸರ್ಕಾರದ ಅನುದಾನದಲ್ಲಿಯೇ ಕಾಮಗಾರಿ ನಿರ್ವಹಿಸಬೇಕಾದ ಅನಿವಾರ್ಯತೆ ಮಂಡಳಿಗಿದೆ.
ಕಳೆದ ಸಾಲಿನಲ್ಲಿ ಮಂಡಳಿಗೆ ಬಿಡುಗಡೆಯಾದ ಅನುದಾನದಲ್ಲಿ ರು. 9.82 ಕೋಟಿ ಖರ್ಚು ಆಗದೆ ಹಾಗೆಯೇ ಉಳಿದಿತ್ತು. ಈ ಮೊತ್ತಕ್ಕೆ ರು. 20 ಕೋಟಿ ಹಾಗೂ ನಿರೀಕ್ಷಿತ ಹೆಚ್ಚುವರಿ ಅನುದಾನ ರು. 10 ಕೋಟಿ ಸೇರಿಸಿ ಒಟ್ಟು ರು. 39.82 ಕೋಟಿಗೆ  ಪ್ರಸಕ್ತ ಸಾಲಿನ ಕ್ರಿಯಾ ಯೋಜನೆ ರೂಪಿಸಲಾಗಿದೆ. ಈ ಅನುದಾನದಲ್ಲಿ ವಿಶೇಷ ಘಟಕ ಯೋಜನೆಗಳಿಗೆ ರು. 8.87 ಕೋಟಿ ಹಾಗೂ ಗಿರಿಜನ ಉಪಯೋಜನೆಗೆ ರು. 3.29 ಕೋಟಿ ರುಪಾಯಿ ಕಾಯ್ದಿರಿಸಲಾಗಿದೆ.

ಅರ್ಧದಷ್ಟು ಉಳಿಕೆ ಕಾಮಗಾರಿ
ಮಂಡಳಿಗೆ ರಾಜ್ಯ ಸರ್ಕಾರ ಕಡಿಮೆ ಪ್ರಮಾಣದ ಅನುದಾನ ನೀಡುತ್ತಿರುವುದರಿಂದ ಸ್ಪಿಲ್ ಓವರ್‌ಗಳು ಜಾಸ್ತಿಯಾಗುತ್ತಿವೆ. ಹಾಗಾಗಿ ಅನುದಾನದ ನಿರೀಕ್ಷೆಯಲ್ಲಿ ಹೆಚ್ಚುವರಿ ಕಾಮಗಾರಿಗಳ ಕೈಗೆತ್ತಿಕೊಳ್ಳಲಾಗುತ್ತಿದೆ. ಇಂತಹ ಉಳಿಕೆ ಕಾಮಗಾರಿಗಳಿಗೆ ರು.  12.93 ಕೋಟಿ ಅನುದಾನವನ್ನು 2014-15 ನೇ ಸಾಲಿಗೆ ಕಾಯ್ದಿರಿಸಲಾಗಿದೆ. ಹೊಸ ಕಾಮಗಾರಿಗಳಿಗೆ ರು. 26.89 ಕೋಟಿ ಅನುದಾನ ಹಂಚಿಕೆಯಾಗುತ್ತಿದೆ. ಸ್ಪಿಲ್ ಓವರ್ ಹೆಸರಲ್ಲಿ 730 ಕಾಮಗಾರಿಗಳು ಇದ್ದರೆ, ಹೊಸದಾಗಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಸಂಖ್ಯೆ ಕೇವಲ  420.
- ಚಿಕ್ಕಪ್ಪನಹಳ್ಳಿ ಷಣ್ಮುಖ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com