

-ಚಿಕ್ಕಪ್ಪನಹಳ್ಳಿ ಷಣ್ಮುಖ
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಗೆ ಈ ಬಾರಿಯೂ ಉತ್ತರ ಕರ್ನಾಟಕದಲ್ಲಿ ಜೋಳ ಸಿಗುವುದು ಅನುಮಾನ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅತೀವ ಕಾಳಜಿ ವಹಿಸಿ ಜೋಳ ಸಂಗ್ರಹಿಸಲು ಮುಂದಾಗಿತ್ತಾದರೂ ಪ್ರಯತ್ನ ಫಲ ನೀಡಿಲ್ಲ.
ಉತ್ಪಾದನೆ ಕೊರತೆ ಹಾಗೂ ರೈತರು ಜೋಳವನ್ನು ಮಾರುಕಟ್ಟೆಗೆ ತಂದು ಮಾರುವ ಉಸಾಬರಿಗೆ ಹೋಗದ ಕಾರಣ ಯೋಜನೆಗೆ ಹಿನ್ನಡೆಯುಂಟಾಗಿದೆ. ಉತ್ತರ ಕರ್ನಾಟಕದ ಜೋಳ ತಿನ್ನುವ ಬಡ ಜನರು ಅನಿವಾರ್ಯವಾಗಿ ಗೋದಿ ಬಳಸಬೇಕಿದೆ.
ಅಂತ್ಯೋದಯ ಕಾರ್ಡ್‌ಗೆ ಮಾಸಿಕ 29 ಕೆಜಿ ಅಕ್ಕಿ, 6 ಕೆಜಿ ಗೋದಿ ಹಾಗೂ ಒಂದು ಕಿಲೋ ಸಕ್ಕರೆ ನೀಡಲಾಗುತ್ತಿದೆ. ಅದೇ ರೀತಿ ಬಿಪಿಎಲ್ ಕಾರ್ಡ್‌ಗೆ ಯುನಿಟ್ ಆಧಾರದಲ್ಲಿ ಆಹಾರ ಧಾನ್ಯ ಪೂರೈಕೆ ಮಾಡಲಾಗುತ್ತದೆ. ಮೂರು ಯುನಿಟ್ ಇದ್ದರೆ 20 ಕೆಜಿ ಅಕ್ಕಿ, 10 ಕೆಜಿ ಗೋದಿ ಹಾಗೂ ಒಂದು ಕಿಲೋ ಸಕ್ಕರೆ ನೀಡಲಾಗುತ್ತದೆ. ಉತ್ತರ ಕರ್ನಾಟಕದ ಜನ ಹೆಚ್ಚು ಅಕ್ಕಿ ಬಳಸದ ಕಾರಣ 25-05ರ ಅನುಪಾತದಲ್ಲಿ ಜೋಳ ಕೊಡಿ ಎಂಬ ಬೇಡಿಕೆ ಸರ್ಕಾರದ ಮುಂದೆ ಇತ್ತು.
ಬಾಗಲಕೋಟೆ ಜಿಲ್ಲೆಯೊಂದರಲ್ಲಿಯೇ ಬಿಪಿಎಲ್ ಹಾಗೂ ಅಂತ್ಯೋದಯ ಸೇರಿ 3,44,278 ಕಾರ್ಡ್‌ಗಳಿದ್ದು ಪ್ರತಿ ಕಾರ್ಡ್‌ಗೆ ಐದು ಕೆಜಿ ಜೋಳ ಲೆಕ್ಕ ಹಾಕಿದರೆ ತಿಂಗಳಿಗೆ 17,213 ಕ್ವಿಂಟಾಲ್ ಜೋಳ ಬೇಕಾಗುತ್ತದೆ. ಅದೇ ರೀತಿ ಐದು ಜಿಲ್ಲೆಗಳನ್ನು ಪರಿಗಣಿಸಿದರೆ ಸರಾಸರಿ ತಿಂಗಳಿಗೆ ಲಕ್ಷ ಕ್ವಿಂಟಾಲ್ ಜೋಳ ಬೇಕು. ಇಷ್ಟೊಂದು ಪ್ರಮಾಣದಲ್ಲಿ ಉತ್ಪಾದನೆ ಎಲ್ಲಿ ಆಗಿದೆ?
ಮುಂದಾಲೋಚನೆ ಕೊರತೆ
ಅನ್ನಭಾಗ್ಯಕ್ಕೆ ಜೋಳ ನೀಡುವ ಭರವಸೆ ನೀಡಿದ ಸರ್ಕಾರ ಮುಂಗಾರು ಹಂಗಾಮಿಗೂ ಮುಂಚೆ ಬೆಂಬಲ ಬೆಲೆ ಘೋಷಿಸಿದ್ದರೆ ರೈತರು ಉತ್ತೇಜನಗೊಂಡು ಜೋಳ ಬೆಳೆಯಲು ಮುಂದಾಗುತ್ತಿದ್ದರು. ಈ ಕೆಲಸ ಮಾಡದೆ ಕೇವಲ ಖರೀದಿ ಕೇಂದ್ರ ತೆರೆಯುತ್ತಿದ್ದಾರೆ. ಹಾಗಾಗಿ ಜೋಳ ದಾಸ್ತಾನು ಮಾಡಿಕೊಳ್ಳುವುದು ಕಷ್ಟವೆನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ. ಜೋಳದ ಉತ್ಪಾದನೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂದರೆ ಉತ್ತರ ಕರ್ನಾಟಕದ ಕಡೆ ವಿಸ್ತೃತವಾಗಿ ಹರಡಿಕೊಂಡಿರುವ ಖಾನಾವಳಿಗಳಲ್ಲಿ ಉತ್ತಮ ರೊಟ್ಟಿಯೇ ಸಿಗುತ್ತಿಲ್ಲ. ಜೋಳದೊಂದಿಗೆ ಅಕ್ಕಿ ಮಿಶ್ರಣ ಮಾಡಿ ರೊಟ್ಟಿ ಮಾಡಲಾಗುತ್ತಿದೆ.
ಖರೀದಿ ಕೇಂದ್ರಕ್ಕೆ ಬಾರದ ಜೋಳ
ಅನ್ನಭಾಗ್ಯ ಯೋಜನೆಗೆಂದೇ ಜೋಳ ದಾಸ್ತಾನು ಮಾಡಿಕೊಳ್ಳಲು ಬಾಗಲಕೋಟೆ, ಬಿಜಾಪುರ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ ಜೋಳ ಸಂಗ್ರಹಕ್ಕೆ ಸರ್ಕಾರ ಮುಂದಾಗಿತ್ತು. ಕ್ವಿಂಟಾಲ್‌ಗೆ ರು. 1,800 ಬೆಂಬಲ ಬೆಲೆ ನಿಗದಿಪಡಿಸಲಾಗಿತ್ತು. ರೈತರು ಖರೀದಿ ಕೇಂದ್ರಕ್ಕೆ ಗುಣಮಟ್ಟದ ಜೋಳವನ್ನು ತರಲಿಲ್ಲ. ಜೋಳದಲ್ಲಿ ತೇವಾಂಶದ ಪ್ರಮಾಣ ಶೇ. 14 ರಷ್ಟಿದ್ದರೆ ಮಾತ್ರ ಖರೀದಿಸಲಾಗುತ್ತದೆ. ಆದರೆ, ಶೇ. 20, 25ರಷ್ಟು ತೇವಾಂಶ ಇದ್ದ ಜೋಳ ಮಾರುಕಟ್ಟೆಗ ಬಂದಿತ್ತು. ಬಹುತೇಕ ಜೋಳ ಕಪ್ಪಗಾಗಿತ್ತು. ಹಾಗಾಗಿ ಖರೀದಿಸಲು ಆಗಲಿಲ್ಲವೆನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.
Advertisement