ಬಾಗಲಕೋಟೆ: ಬಾಕಿ ಹಣ ಪಾವತಿಗೆ ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರಿಂದ ಜೂ. 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದೆಂದು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ರೈತರು ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸಿ, ಇಲ್ಲವೇ ನೀವೇ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುವರು. ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ರು. 3500 ಕೋಟಿ ಬಾಕಿ ಬರಬೇಕಾಗಿದೆ. ಇಷ್ಟೊಂದು ಪ್ರಮಾಣದ ಹಣ ಬಾಕಿ ಉಳಿದಿದ್ದರೂ ಕಾರ್ಖಾನೆ ಮಾಲೀಕರನ್ನು ಸರ್ಕಾರ ನಿಯಂತ್ರಣದಲ್ಲಿಟ್ಟುಕೊಂಡಿಲ್ಲ. ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಳೆದ ವರ್ಷ ಸರ್ಕಾರ ರು. 1064 ಕೋಟಿ ಸಾಲ ನೀಡಿತ್ತು. ಏಳು ವರ್ಷಗಳಿಗೆ ನೀಡಿದ ಬಡ್ಡಿ ರಹಿತ ಸಾಲ ಇದಾಗಿತ್ತು. ಕಾರ್ಖಾನೆಗಳ ವಿಚಾರದಲ್ಲಿ ಮೃಧು ದೋರಣೆ ತಳೆಯುವ ಸರ್ಕಾರ ಕಬ್ಬು ಬೆಳೆಗಾರರಿಗೆ ಇದೇ ರೀತಿ ಬಡ್ಡಿ ರಹಿತ ಸಾಲ ನೀಡಲಿ. ಈ ಅಂಶ ಪ್ರಧಾನವಾಗಿರಿಸಿಕೊಂಡು ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.
Advertisement