ನೀರಿನ ಸಮಸ್ಯೆಗೆ ಸದಸ್ಯರ ನಿರಾಸಕ್ತಿ

Updated on: 

ರಬಕವಿ: ಬೇಸಿಗೆ ಸಮಯದಲ್ಲಿ ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತು ಚರ್ಚಿಸಿ ಕ್ರಮ ತೆಗೆದುಕೊಳ್ಳಲು ಜಮಖಂಡಿ ಉಪವಿಭಾಗಾಧಿಕಾರಿ ಅಶೋಕ ದುಡಗುಂಟಿ ನೇತೃತ್ವದಲ್ಲಿ ಕೆರಯಲಾಗಿದ್ದ ಮಹತ್ವದ ಸಭೆಗೆ ಶ್ರೀಸಾಮಾನ್ಯನ ಪರವಾಗಿ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮುಟ್ಟಿಸಬೇಕಿದ್ದ ನಗರಸಭೆ ಸದಸ್ಯರ ಪೈಕಿ ಕೆಲವರು ಮಾತ್ರ ಹಾಜರಾಗಿದ್ದರು.
ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಅಶೋಕ ದುಡಗುಂಟಿ, ಹಿಪ್ಪರಗಿ ಜಲಾಶಯದಲ್ಲಿ ಸದ್ಯ 0.8 ಟಿ.ಎಂ.ಸಿ.ನೀರು ಮಾತ್ರ ಸಂಗ್ರಹವಿದ್ದು, ರಬಕವಿ-ಬನಹಟ್ಟಿ ಅವಳಿ ನಗರಗಳಿಗೆ ಈ ನೀರು 12ದಿನಕ್ಕೆ ಮಾತ್ರ ಸಾಕಾಗುವಷ್ಟಿದೆ. ಈಗಾಗಲೇ ಸರ್ಕಾರದ ಉನ್ನತ ಮಟ್ಟದಲ್ಲಿ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವತ್ತ ಬಹು ಯತ್ನ ನಡೆಯುತ್ತಿದೆ. ಮುಂದಿನ 2-3 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಬಾಗಲಕೋಟೆ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು ಮುಂಬರುವ ನೀರಿನ ಬವಣೆಯನ್ನು ಎದುರಿಸಲು ನಾವೆಲ್ಲ ಸಿದ್ದರಾಗಬೇಕೆಂದರು.
ಪೌರಾಯುಕ್ತ ಆರ್.ಎಂ.ಕೊಡಗೆ ಮಾತನಾಡಿ, ನೀರಿನ ಸಮಸ್ಯೆ ಎದುರಿಸಲು ನಗರಸಭೆ ಸರ್ವ ಸನ್ನದ್ಧವಾಗಿದೆ.54 ಕೈಪಂಪ್‌ಗಳು,84 ವಿದ್ಯುತ್ ಬೋರವೆಲ್‌ಗಳು ಸಿದ್ಧವಿದ್ದು ಸುಮಾರು 50ಲಕ್ಷ  ಕುಡಿಯುವ ನೀರಿಗಾಗಿ ಮೀಸಲು ಇಡಲಾಗಿದೆ. ಸಾರ್ವಜನಿಕರು ಅಮೂಲ್ಯವಾದ ಜೀವ ಜಲವನ್ನು ಚರಂಡಿಗೆ ಹರಿಸಿ ಪೋಲು ಮಾಡದೇ ಮಿತವಾಗಿ ಬಳಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಬೇಸಿಗೆಯ ನೀರಿನ ಬವಣೆ ನಿವಾರಣೆಗೆ ಕರೆಯಲಾಗಿದ್ದ ಮಹತ್ವದ ಸಭೆಗೆ ರಬಕವಿ-ಬನಹಟ್ಟಿ ನಗರಸಭೆಯ 31 ವಾರ್ಡುಗಳ ಸದಸ್ಯರ ಪೈಕಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸದಸ್ಯರು ಪಾಲ್ಗೊಂಡಿದ್ದುದು ಸದಸ್ಯರಲ್ಲಿನ ಜನಸಾಮಾನ್ಯರ ಕಾಳಜಿಯನ್ನು ಬಿಂಬಿಸುವಂತಿತ್ತು.
ಸಭೆಯಲ್ಲಿ ಜಮಖಂಡಿ ತಹಸೀಲ್ದಾರ ಅದಾಡೆ, ರಬಕವಿ ನಗರಾಧ್ಯಕ್ಷ ಕಣೆಪ್ಪ ಹಾರೂಗೇರಿ, ಉಪಾಧ್ಯಕ್ಷೆ ರಮೀಜಾ ಝಾರೆ ವೇದಿಕೆಯಲ್ಲಿದ್ದರು. ಸದಸ್ಯರಾದ ಸಂಜಯ ತೆಗ್ಗಿ, ಈಶ್ವರ ನಾಗರಾಳ, ಯಲ್ಲಪ್ಪ ಕಟಗಿ,ಶ್ರೀಕಾಂತ ವಾಘಮೋರೆ, ಇಸಾಕ್ ಸವದಿ, ಶೈಲಜಾ ಹೊಸಕೋಟೆ, ನಸೀಮ ಮೊಕಾಶಿ, ಚಿದಾನಂದ ಮಟ್ಟಿಕಲ್ಲಿ, ನೂರ ಜಹಾನ್ ಮುಲ್ಲಾ, ಸಂಜಯ ಜೀರಗಾಳ, ವಾಸುದೇವ ಕೋಪರ್ಡೆ, ಓಂಪ್ರಕಾಶ ಮನಗೂಳಿ,ಪರಶುರಾಮ ಮನ್ನವ್ವಗೋಳ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com