ಇತಿಹಾಸ ಪ್ರಜ್ಞೆ ಬೆಳೆಸಿಕೊಳ್ಳಿ: ಕುರಿ

Updated on: 

ಬಾದಾಮಿ: ನಮ್ಮ ಪೂರ್ವಜರ ಇತಿಹಾಸವನ್ನು ಸಾರುವ ವೀರಗಲ್ಲು, ಶಾಸನಗಳು ಮತ್ತು ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಮುಂದಿನ ಜನಾಂಗಕ್ಕೆ ಕೊಡುವ ವಸ್ತು ಸಂಗ್ರಹಾಲಯದ ಕಾರ್ಯ ಶ್ಲಾಘನೀಯ ಎಂದು ಇಂಟೆಕ್ ಸಂಸ್ಥೆಯ ಸಂಚಾಲಕ ಪ್ರೊ. ಎಂ.ಎಫ್.ಕುರಿ ಹೇಳಿದರು.
ಭಾನುವಾರ ನಗರದ ಬಾವನ್ ಬಂಡೆ ಕೋಟೆ ಬಳಿ ಇರುವ ವಸ್ತು ಸಂಗ್ರಹಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮತ್ತು ನಗರದ ಪುರಾತತ್ವ ಸಂಗ್ರಹಾಲಯದ ವತಿಯಿಂದ ನಡೆದ ವಿಶ್ವ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಇತಿಹಾಸ ಸಂಶೋಧಕ ಡಾ.ಶೀಲಾಕಾಂತ ಪತ್ತಾರ ಮಾತನಾಡಿ, ಇಂದು ಪ್ರತಿಯೊಬ್ಬರೂ ಇತಿಹಾಸ ಪ್ರಜ್ಞೆ ಬೆಳೆಸಿಕೊಳ್ಳಬೇಕು. ವಸ್ತು ಸಂಗ್ರಹಾಲಯಗಳಿಂದ ಮನುಷ್ಯನ ಇತಿಹಾಸ ತಿಳಿಯುತ್ತದೆ. ಇದೊಂದು ಅದ್ಭುತ ಗ್ರಂಥಾಲಯ ಮತ್ತು ಜ್ಞಾನ ದೇಗುಲ ಇದ್ದಂತೆ ಎಂದರು.
ಇತಿಹಾಸ ಬಲ್ಲವನು ಭವಿಷ್ಯವನ್ನು ನಿರ್ಮಿಸಬಲ್ಲ. ಜೀವನದ ಬೇರೆ ಬೇರೆ ಹಂತದಲ್ಲಿ ಇತಿಹಾಸ ಆಧಾರವಾಗಿದೆ. ಇಂದಿನ ಯುವಕರು ವಸ್ತು ಸಂಗ್ರಹಾಲಯದಲ್ಲಿರುವ ಪ್ರತಿ ವಸ್ತುಗಳನ್ನು ವೀಕ್ಷಿಸಬೇಕು ಮತ್ತು ಪ್ರಾಚೀನ ಸ್ಮಾರಕಗಳು ನಾಡಿನ ಆಸ್ತಿ, ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಜೆ.ಬಿ.ಶೀಲವಂತರ, ಉದಯ ಆನಂದ ಶಾಸ್ತ್ರೀ, ಮುಖ್ಯ ಶಿಕ್ಷಕ ಎಸ್.ಎಂ.ಹಿರೇಮಠ ಉಪಸ್ಥಿತರಿದ್ದರು. ಆನಂದ ಶಾಸ್ತ್ರೀ ಸ್ವಾಗತಿಸಿದರು. ಶಿಕ್ಷಕ ಎಸ್.ಎ.ಗಿರಿತಮ್ಮನ್ನವರ ನಿರೂಪಿಸಿದರು. ಸುಭಾಸ ಬೊಂಬ್ಲೆ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com