ಜಮಖಂಡಿ: ಅಖಂಡ ಭಾರತ ನಿರ್ಮಾಣಕ್ಕೆ ಜಾತಿ ಭೇದ ರಾಜಕಾರಣ ಹೊರಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಇಚಲಕರಂಜಿಯ ಭಕ್ತಿ ಯೋಗಾಶ್ರವುದ ಮಹೇಶಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಮೈಗೂರು ಗ್ರಾಮದಲ್ಲಿ ನಡೆದ ಶಿವಾನಂದ ಮಠದ ಜಾತ್ರಾಮಹೋತ್ಸವ, ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳ 20ನೇ ಪುಣ್ಯಾರಾಧನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.
ಈ ದೇಶದ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಲು ಮಠ, ಮಠಾಧೀಶರು ಅಷ್ಟೇ ಹೋರಾಟ ನಡೆಸಿದರೆ ಸಾಲದು. ಸಾಮಾನ್ಯ ಜನರು ಕೂಡಾ ಕೈ ಜೋಡಿಸಬೇಕು. ಧರ್ಮ ಮತ್ತು ಗುರುಗಳು ಭಾರತದ ಹಿಂದೂ ಸಂಸ್ಕೃತಿ, ಪರಂಪರೆಯನ್ನು ಸಾರುವ ಕೇಂದ್ರಗಳಾಗಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತಿ ಮತ್ತು ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು. ದೇಶ, ಸಮಾಜ, ಹಿಂದೂತ್ವ ಮತ್ತು ಗುರು ಪರಂಪರೆಯನ್ನು ಪಾಲಿಸುವ ವ್ಯವಸ್ಥೆ ಬರಬೇಕಾಗಿದೆ ಎಂದರು. ತರುಣರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದು, ಅದನ್ನು ಹೋಗಲಾಡಿಸಲು ನೀತಿ ಪಾಠ, ಪ್ರವಚನ ಹಮ್ಮಿಕೊಳ್ಳಬೇಕು. ತಾಯ್ನಾಡಿಗೆ ಕುತ್ತು ಬಂದಾಗ ಹೋರಾಟ ಮಾಡುವ ಮನೋಭಾವನೆ ಎಲ್ಲರಲ್ಲೂ ಬರಬೇಕು ಎಂದರು. ಹುನ್ನೂರು-ಮಧರಖಂಡಿ ಬಸವಜ್ಞಾನ ಗುರುಕುಲ ಆಶ್ರಯದ ಶರಣ ಡಾ.ಈಶ್ವರ ಮಂಟೂರ ಮಾತನಾಡಿದರು. ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅಮೃತಾನಂದ ಸ್ವಾಮೀಜಿ, ಡಾ.ಉಮೇಶ ಮಹಾಬಳಶೆಟ್ಟಿ, ಬಸವರಾಜ ಸಿಂಧೂರ, ಗುರುದೇವಾಶ್ರಮದ ಗುರುಪ್ರಸಾದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ರಾಮಣ್ಣಾ ಕಲೂತಿ, ಅಶೋಕ ಚಂದಪ್ಪಗೋಳ, ಸಿದ್ದರಾಮ ಮುಗಳಿ, ಮಲ್ಲಿಕಾರ್ಜುನ ಅಂಕಲಗಿ, ಪರಗೌಡ ಬಿರಾದಾರ ಇದ್ದರು. ಡಾಕ್ಟರೇಟ್ ಪದವಿ ಪಡೆದ ಹುನ್ನೂರು ಬಸವಜ್ಞಾನ ಗುರುಕುಲದ ಶರಣ ಡಾ.ಈಶ್ವರ ಮಂಟೂರ ಅವರನ್ನು ಸನ್ಮಾನಿಸಲಾಯಿತು. ಕಕಮರಿ ಸ್ವಾಗತಿಸಿದರು. ಮಲ್ಲು ತೆಲಸಂಗ ನಿರೂಪಿಸಿದರು.
Advertisement