ಬಾಗಲಕೋಟೆ: ದಿನದಿಂದ ದಿನಕ್ಕೆ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಇದನ್ನು ತಡೆಯಲು ಸಂಚಾರಿ ಪೊಲೀಸರು ಯಾಕೋ ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದಕ್ಕೆ ಬ್ರೇಕ್ ಬಿದ್ದಿಲ್ಲ.
ಈ ಹಿಂದೆ ಇದ್ದ ಹುಮ್ಮಸ್ಸು ಕರ್ತವ್ಯ ನಿಷ್ಠೆ, ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಕಾಣುತ್ತಿಲ್ಲ. ಪೊಲೀಸರು ಕರ್ತವ್ಯ ನಿಭಾಯಿಸುವಲ್ಲಿ ನಿಷ್ಕಾಳಜಿ ವಹಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಸಾಮಾನ್ಯ ಆರೋಪ.
ಜಿಲ್ಲೆಯಲ್ಲಿ ಏಕೈಕ ಸಂಚಾರಿ ಪೊಲೀಸ್ ಠಾಣೆ ಇದೆ. ಮುಳುಗಡೆ ಹಿನ್ನೀರು ಸರಿದಾಗ ಅಳಿದು ಉಳಿದ ಕಟ್ಟಡಗಳನ್ನು ತೆರವು ಮಾಡಿಸಿ ಖಾಲಿ ಉಳಿದಿರುವ ವಿಶಾಲವಾದ ಪ್ರದೇಶವನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಇಲಾಖೆ ಮುತುವರ್ಜಿ ವಹಿಸುತ್ತಿಲ್ಲ. ಹಾಗಾಗಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ. ಪೊಲೀಸರು ನಮಗ್ಯಾಕೆ ಎಲ್ಲ ಉಸಾಬರಿ ಎಂದು ಸುಮ್ಮನೆ ತಮ್ಮ ಡ್ಯೂಟಿ ಮುಗಿಸಿ ಮನೆಗೆ ರೈಟ್ ಹೇಳುತ್ತಿದ್ದಾರೆ.
ಸಂಚಾರಕ್ಕೆ ವಾಹನಗಳ ಕಿರಿಕಿರಿ: ನಗರದ ಮಧ್ಯ ಭಾಗದಲ್ಲಿರುವ ವಲ್ಲಭಭಾಯಿ ವೃತ್ತ, ಟಾಂಗಾ ಸ್ಟ್ಯಾಂಡ್, ಬಸವೇಶ್ವರ ವೃತ್ತ, ರೇಲ್ವೆ ಸ್ಟೇಷನ್ ರಸ್ತೆ, ಹೊಳೆ ಆಂಜನೇಯ ದೇವಸ್ಥಾನದ ಹಿಂದೆ ಹಾಗೂ ಪಕ್ಕದಲ್ಲಿ ದ್ವಿಚಕ್ರ ವಾಹನ ಸೇರಿದಂತೆ ದೊಡ್ಡ ದೊಡ್ಡ ವಾಹನಗಳನ್ನು ರಸ್ತೆ ಇಕ್ಕಲಗಳಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ರಸ್ತೆಯಲ್ಲಿ ಜನಜಂಗಳಿ ಹೆಚ್ಚು.
ಇಲ್ಲ ಪಾರ್ಕಿಂಗ್ ವ್ಯವಸ್ಥೆ: ದ್ವಿಚಕ್ರ ವಾಹನ ಹೊರತುಪಡಿಸಿ ಉಳಿದೆಲ್ಲ ವಾಹನಗಳ ನಿಲುಗಡೆಗೆ ಹಳೇ ಅಂಚೆ ಕಚೇರಿಯ ಜಾಗೆಯಲ್ಲಿ ಈ ಮೊದಲು ಸಂಚಾರಿ ಪೊಲೀಸರು ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರು. ಸಂಚಾರಿ ಪೊಲೀಸ್ ನಿರ್ಲಕ್ಷ್ಯತನದಿಂದ ಅದು ಈಗ ಒತ್ತು ಗಾಡಿಗಳ ಹೊಟೇಲ್ ಜಾಗವಾಗಿ ಪರಿವರ್ತನೆಯಾಗಿದೆ.
ಅದರ ಅನತಿ ದೂರದಲ್ಲಿರುವ ಹಳೇ ನಗರಸಭೆ ಕಟ್ಟಡದ ಜಾಗೆಯಲ್ಲಿ ಖಾಸಗಿಯವರು ಹಳೆಯ ವಸ್ತುಗಳ ಮಾರುಕಟ್ಟೆಯನ್ನಾಗಿ ಮಾಡಿಕೊಂಡು ತಮ್ಮ ವ್ಯಾಪಾರವನ್ನು ಮಾಡುತ್ತಿದ್ದಾರೆ.
ಖುಲ್ಲಾ ಇರುವ ಜಾಗದಲ್ಲಿ ಪಾರ್ಕಿಂಗ್ ಸ್ಥಳಗಳನ್ನಾಗಿ ಮಾಡಿದರೆ ನಗರದಲ್ಲಿ ಸುಗಮ ಸಂಚಾರ ಮಾಡಬಹುದು. ಇಲ್ಲದಿದ್ದರೆ ಮುಂದೊಂದು ದಿನ ರಸ್ತೆ ಮಧ್ಯ ವಾಹನಗಳನ್ನು ನಿಂತರೂ ಅಚ್ಚರಿ ಪಡಬೇಕಿಲ್ಲ.
ವಾಹನ ಮಾಲೀಕರಿಗೆ ದಂಡ ಹಾಕಬೇಕು
ಸಂಚಾರಿ ಪೊಲೀಸರು ಕಟ್ಟು ನಿಟ್ಟಾಗಿ ಕರ್ತವ್ಯ ನಿಭಾಯಿಸದ ಕಾರಣ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲ. ತ್ರಿಚಕ್ರ, ನಾಲ್ಕು ಗಾಲಿಗಳ ವಾಹನಗಳನ್ನು ಹಳೇ ಅಂಚೆ ಕಚೇರಿ ಜಾಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದರಿಂದ ವಲ್ಲಭಭಾಯಿ ವೃತ್ತದಲ್ಲಿ ವಾಹನ ದಟ್ಟಣೆಯನ್ನು ಕೊಂಚ ಕಡಿಮೆ ಮಾಡಬಹುದು. ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ ಮಾಲೀಕರಿಗೆ ದಂಡ ಹಾಕಬೇಕು.
ಅಶೋಕ ಕೋಟಿ, ಸಂತೋಷ ಹಂಜಗಿ, ವಾಹನ ಮಾಲೀಕರು
ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು
ನಗರಸಭೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ವಲ್ಲಭಭಾಯಿ ವೃತ್ತದಲ್ಲಿ ಎಲ್ಲಿಂದರಲ್ಲಿ ವಾಹನ ನಿಲ್ಲುವದನ್ನು ತಪ್ಪಿಸಿಲು ಹಳೇ ಅಂಚೆ ಕಚೇರಿ ಹಾಗೂ ಹಳೇ ನಗರಸಭೆ ಕಟ್ಟಡದ ಜಾಗದಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು.
ಶಿವಶಂಕರ ಗಣಾಚಾರಿ, ಸಿಪಿಐ
-ಚಂದ್ರು ಅಂಬಿಗೇರ
Advertisement