

-ಚಿಕ್ಕಪ್ಪನಹಳ್ಳಿ ಷಣ್ಮುಖ
ಬಾಗಲಕೋಟೆ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಡಿಗ್ರಿ ಮಾಡಲು ಇನ್ನು ಮುಂದೆ ಹಣಕಾಸು ಮುಗ್ಗಟ್ಟು ಎದುರಿಸಬೇಕಾದ ಅಗತ್ಯವಿಲ್ಲ. ಇಂತಹ ವಿದ್ಯಾರ್ಥಿಗಳ ನೆರವಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಧಾವಿಸಿ ಬಂದಿದ್ದು ರಾಜೀವಗಾಂಧಿ ಸಾಲ ರೂಪದ ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಿದೆ.
ವಾರ್ಷಿಕ ವರಮಾನ 2.50 ಲಕ್ಷಕ್ಕೂ ಕಡಿಮೆ ಇರುವ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರು ಯೋಜನೆ ಫಲಾನುಭವಿಗಳಾಗಲು ಅರ್ಹರು. ಯೋಜನೆ ಅನುಷ್ಠಾನಕ್ಕೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 5 ಕೋಟಿ ಒದಗಿಸಲಾಗಿದ್ದು, 50 ಸಾವಿರ ವಿದ್ಯಾರ್ಥಿಗಳು ಲಾಭ ಪಡೆಯಬೇಕೆಂಬುದು ಸರ್ಕಾರದ ಆಶಯ.
ಜಾರಿ ಉದ್ದೇಶ?: ಯಾವುದೇ ವ್ಯಕ್ತಿ ಆರ್ಥಿಕ ದುರ್ಬಲತೆ ಕಾರಣಕ್ಕೆ ಉನ್ನತ ಶಿಕ್ಷಣ ಸೌಲಭ್ಯದಿಂದ ವಂಚಿತನಾಗಬಾರದೆಂಬ ಕಾಳಜಿ ಇಟ್ಟುಕೊಂಡು ಜಾರಿಗೊಳಿಸಲಾದ ಯೋಜನೆಯಿದು. ರಾಜ್ಯದ ಉನ್ನತ ಶಿಕ್ಷಣದಲ್ಲಿ ಒಟ್ಟಾರೆ ಪ್ರವೇಶಾತಿ ಪ್ರಮಾಣ ಶೇ. 25.5ರಷ್ಟಿದ್ದು 13ನೇ ಪಂಚವಾರ್ಷಿಕ ಯೋಜನೆ ಅಂತ್ಯದೊಳಗೆ ಇದನ್ನು ಶೇ.32ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಏನಿದು ಯೋಜನೆ?: ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ ಹಾಗೂ 5 ವರ್ಷದ ಇಂಟಿಗ್ರೇಟೆಡ್ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸುವುದಾಗಿದೆ. ಹಾಲಿ ವೃತ್ತಿ ಶಿಕ್ಷಣಕ್ಕೆ ಇದ್ದ ರಾಷ್ಟ್ರೀಕೃತ ಬ್ಯಾಂಕುಗಳ ಎಜುಕೇಷನ್ ಲೋನ್ ವಿಸ್ತ್ರತ ಸ್ವರೂಪ ಇದು. ಓದು ಮುಕ್ತಾಯವಾಗುವ ತನಕ ಸರ್ಕಾರ ಬಡ್ಡಿಯನ್ನು ಸಹಾಯಧನದ ರೂಪದಲ್ಲಿ ಬ್ಯಾಂಕ್‌ಗಳಿಗೆ ಪಾವತಿಸುತ್ತದೆ. ಉದ್ಯೋಗ ದೊರಕಿದ 6 ತಿಂಗಳ ನಂತರ ಇಲ್ಲವೇ ವಿದ್ಯಾಭ್ಯಾಸ ಮುಗಿಸಿದ ವರ್ಷದ ನಂತರ ಸಾಲ ಮರುಪಾವತಿ ಆರಂಭವಾಗುತ್ತದೆ.
ಸಾಲದ ಮೊತ್ತವೆಷ್ಟು?: ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ ಹಾಗೂ 5 ವರ್ಷದ ಇಂಟಗ್ರೇಟೆಡ್ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಗರಿಷ್ಠ 60 ಸಾವಿರ 3 ವರ್ಷಗಳಿಗೆ 1.80 ಲಕ್ಷ, ಐದು ವರ್ಷದ ಇಂಟಗ್ರೇಟೆಡ್ ಕೋರ್ಸ್‌ಗಳಿಗೆ ಪ್ರತಿ ವರ್ಷ 60 ಸಾವಿರದಂತೆ 3 ಲಕ್ಷ, 6 ತಿಂಗಳ ಒಳಗಿನ ಕಡಿಮೆ ಅವಧಿ ಕೋರ್ಸುಗಳಿಗೆ 20 ಸಾವಿರ, 1 ವರ್ಷದ ಅವಧಿಗೆ ಮೀರಿದ ಕೋರ್ಸ್‌ಗೆ 1ಲಕ್ಷ ಸಾಲ ನಿಗದಿಪಡಿಸಲಾಗಿದೆ. ಬ್ಯಾಂಕುಗಳ 4 ಲಕ್ಷವರೆಗೆ ಶೇ.12ರಷ್ಟು ಬಡ್ಡಿ ವಿಧಿಸುತ್ತವೆ. ವಿದ್ಯಾರ್ಥಿನಿಯರಿಗೆ ಬಡ್ಡಿ ದರದಲ್ಲಿ ಶೇ.1ರಷ್ಟು ಕಡಿತ ಮಾಡಲಾಗಿದೆ. ಸಾಲ ಪಡೆಯುವ ವಿದ್ಯಾರ್ಥಿ ಆಧಾರ್ ಮತ್ತು ಪಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಬ್ಯಾಂಕ್‌ಗೆ ನೀಡಬೇಕು. ಪದವಿಯಲ್ಲಿ ಟ್ಯಾಗ್ ಮಾರ್ಕರ್ ಮಾಡುವುದರಿಂದ ಉದ್ಯೋಗ ದೊರೆತ ಮೇಲೆ ಎಲೆಕ್ಟ್ರಾನಿಕ್ ಟ್ಯಾಗ್ ಮೂಲಕ ಸಾಲ ಮಸೂಲಿ ಸುಲಭವಾಗುತ್ತದೆ ಎಂಬುದು ಸರ್ಕಾರದ ಅಂಬೋಣ.
ಪ್ರಾಂಶುಪಾಲರ ಹೊಣೆ: ವಿದ್ಯಾರ್ಥಿ ಪಿಯುಸಿ ಅಥವಾ 10 ಪ್ಲಸ್ 2 ಕೋರ್ಸ್‌ನಲ್ಲಿ ಕನಿಷ್ಠ 50ರಷ್ಟು ಅಂಕ ಪಡೆದಿರಬೇಕು. ಪಿಯು ನಂತರ ಸರ್ಕಾರಿ ಅಥವಾ ಅನುದಾನಿತ ಕಾಲೇಜಿನ ಪ್ರವೇಶ ಪಡೆದಿರಬೇಕು. ಬ್ಯಾಂಕ್‌ಗಳಿಂದ ಅರ್ಜಿಗಳನ್ನು ಪಡೆದು ಪ್ರಾಂಶುಪಾಲರಿಗೆ ಸಲ್ಲಿಸಬೇಕು.
ನಂತರ ಅವರು ಬ್ಯಾಂಕುಗಳಿಗೆ ರವಾನಿಸುತ್ತಾರೆ. ವಿದ್ಯಾರ್ಥಿ ವೇತನ ಪಾವತಿ ಆಗುವ ತನಕ ಪ್ರಾಂಶುಪಾಲರೇ ಪೂರ್ಣ ಪ್ರಮಾಣದ ಉಸ್ತುವಾರಿ ಹೊರಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರುತ್ತದೆ.
Advertisement