ಮಾಗಡಿ: ಗುಣಮಟ್ಟದ ಹಾಲು ಪೂರೈಕೆಯಲ್ಲಿ ಮಾಗಡಿ ತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಈಗ ಸುಮಾರು 1.50 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಇದರಿಂದ ಸುಮಾರು 7 ಕೋಟಿ ರು. ವೆಚ್ಚದಲ್ಲಿ ಇಲ್ಲಿನ ಸೋಲೂರು ಹಾಲು ಶಿಥಲೀ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ರಮೇಶ್ ನುಡಿದರು.
ಅವರು ಮಾಗಡಿ ತಾಲೂಕಿನ ಸೋಲೂರು ಹಾಲು ಶಿಥಲೀ ಕೇಂದ್ರದಲ್ಲಿ ಏರ್ಪಡಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ರೈತ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ, ಸೋಲೂರು ಹಾಲು ಶಿಥಲೀಕೇಂದ್ರದಲ್ಲಿ ಕೇವಲ 60 ಸಾವಿರ ಲೀಟರ್ ಹಾಲು ಶೇಖರಣೆ ಮಾಡಬಹುದಾಗಿದೆ. ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ಕಲ್ಯಾಣ ಟ್ರಸ್ಟ್ನಡಿಯಲ್ಲಿಯೂ ವಿವಿಧ ಸೌಲತ್ತುಗಳನ್ನು ರೈತರಿಗೆ, ರೈತರ ಮಕ್ಕಳಿಗೆ ಹಾಗೂ ರಾಸುಗಳಿಗೂ ನೀಡುತ್ತಿದೆ ಎಂದರು.
ಒಕ್ಕೂಟವು ರಾಜ್ಯದಲ್ಲಿ ಸುಮಾರು 1.4 ಲಕ್ಷ ಶಾಲಾ ಮಕ್ಕಳಿಗೆ ಹಾಲಿನ ಪೌಡರ್ ಪೂರೈಕೆ ಮಾಡಲಾಗುತ್ತಿದೆ. ಬೆಂಗಳೂರು ಸಹಕಾರಿ ಹಾಲು ಒಕ್ಕೂಟವು ಗುಣಮಟ್ಟದ ಹಾಲು ಪೂರೈಕೆಯಲ್ಲಿ ಮತ್ತು ಸೌಲತ್ತುಗಳನ್ನು ನೀಡುವಲ್ಲಿ ಗುಜರಾತ್ ಸಹಕಾರಿ ಹಾಲು ಒಕ್ಕೂಟಕ್ಕಿಂತ ಕಡಿಮೆಯಿಲ್ಲ ಎಂದರು.
ಒಕ್ಕೂಟದ ಚಿಂತನೆ: ಪ್ರತಿ ಲೀಟರ್ ಹಾಲಿಗೆ 10 ಪೈಸೆಯಂತೆ ಸಹಕಾರಿ ಕಾರ್ಯದರ್ಶಿಗಳಿಗೆ ನೀಡಲು ಒಕ್ಕೂಟ ಚಿಂತಿಸಿದೆ. ಇದನ್ನು ಅವರ ವೇತಕ್ಕೆ ಸರಿದೂಗಿಸುವುದಾಗಿ ತಿಳಿಸಿದರಲ್ಲದೆ ಸಹಕಾರಿ ಸಂಘದಲ್ಲಿನ ನೌಕರರ ಕಷ್ಟಕ್ಕೆ ನೆರವು ನೀಡುವುದು,ಆರೋಗ್ಯ ಶಿಬಿರಗಳನ್ನು ನಡೆಸುವುದು, ವೈದ್ಯಕೀಯ ವೆಚ್ಚವನ್ನು ಬರಿಸುವುದಕ್ಕೆ ಪ್ರತಿ ತಾಲೂಕಿಗೂ 6 ಲಕ್ಷ ರು. ಮೀಸಲಿಡಲಾಗಿದೆ.
ಇಷ್ಟೆಲ್ಲ ಸೌಲತ್ತುಗಳನ್ನು ನೀಡುತ್ತಿರುವುದು ನೀವು ಒಕ್ಕೂಟದ ಮೇಲೆ ಇಟ್ಟಿರುವ ವಿಶ್ವಾಸಕ್ಕಾಗಿ ಎಂದರು. ಪ್ರತಿದಿನ ಒಕ್ಕೂಟಕ್ಕೆ 12 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ.
ಇದರಲ್ಲಿ 8.5 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, 3.5 ಲಕ್ಷ ಲೀಟರ್ ಹಾಲಿನ ಪೌಡರ್ ತಯಾರಿಕೆಗೆ ಕಳಿಸಲಾಗುತ್ತಿದೆ. ಬೆಂಗಳೂರು ಬಳಿ ಹಾಲಿನ ಪೌಡರ್ ಪ್ಯಾಕಿಂಗ್ ಘಟಕ ತೆರೆಯಲು 300 ಕೋಟಿ ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಮೇಶ್ ತಿಳಿಸಿದರು.
ಹಾಲು, ಮಜ್ಜಿಗೆ ಪೂರೈಕೆ: ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ವಿಶ್ವ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆ ಬೆಂಗಳೂರು ಹಾಲು ಒಕ್ಕೂಟದಿಂದ ಹಾಲು, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಪೂರೈಕೆ ಮಾಡಲಾಗುತ್ತಿದೆ. ಮೆಗಾ ಡೈರಿ ಇದ್ದಿದ್ದರಿಂದ ಇಷ್ಟೆಲ್ಲ ಸರಬರಾಜು ಮಾಡಲು ಸಾಧ್ಯವಾಯಿತು. ಬೆಂಗಳೂರಿನಲ್ಲಿ ಮೆಗಾ ಡೈರಿ ಸ್ಥಾಪಿಸಲು ಕೆಎಂಎಫ್ನ ಮಾಜಿ ಅಧ್ಯಕ್ಷ ಎಚ್.ಡಿ. ರೇವಣ್ಣ ಶ್ರಮವನ್ನು ಬಮೂಲ್ ನರಸಿಂಹಮೂರ್ತಿ ಶ್ಲಾಘಿಸಿದರು.
ಇದೇ ವೇಳೆ 2012-13ನೇ ಶಾಲಿನ ಬೆಂಗಳೂರು ಹಾಲು ಒಕ್ಕೂಟದ ಕಲ್ಯಾಣನಿಧಿ ಟ್ರಸ್ಟ್ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಬಮೂಲ್ ಅಧ್ಯಕ್ಷ ಆರ್.ಕೆ ರಮೇಶ್ ವಿತರಿಸಿದರು.ಪ್ರಧಾನ ವ್ಯವಸ್ಥಾಪಕ ಡಾ.ಕೃಷ್ಣಾರೆಡ್ಡಿ, ಉಪ ವ್ಯವಸ್ಥಾಪಕ ರುದ್ರೇಶ್, ಮೋಹನ್ಕುಮಾರ್, ಸಹಾಯಕ ವ್ಯವಸ್ಥಾಪಕ ಜವರಯ್ಯ, ಡಾ.ಸದಾಶಿವ, ಡಾ. ದೇವರಾಜು, ತಾಲೂಕು ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ಅಧ್ಯಕ್ಷ ನಂಜೇಗೌಡ, ಡಾ.ಬಿ.ಕೆ. ಜಗದೀಶ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್.ಮಂಜುನಾಥ್, ನರಸಿಂಹಮೂರ್ತಿ, ಆನಂದ್, ಭಾಸ್ಕರ್, ಇತರರು ಇದ್ದರು.