ಬಿಬಿಎಂಪಿಗೆ ವಾಸ್ತವ ಬಜೆಟ್ ಅಗತ್ಯ

Updated on: 

ಕ.ಪ್ರ.ವಾರ್ತೆ  ಬೆಂಗಳೂರು ಮಾ.24-
ಬಿಬಿಎಂಪಿ ಬಜೆಟ್ನ್ನು ವಿಧಾನಸಭಾ ಚುನಾವಣೆ ನಂತರವೇ ಆದರೂ 'ವಾಸ್ತವ ಬಜೆಟ್' ಮಂಡನೆ ಅನಿವಾರ್ಯವಾಗಿದೆ.
ಏಕೆಂದರೆ, ಆಯುಕ್ತ ಸಿದ್ದಯ್ಯ ಕೈಗೊಂಡ ಕಟ್ಟುನಿಟ್ಟಿನ ಆರ್ಥಿಕ ಕ್ರಮಗಳು ವಾಸ್ತವ ಬಜೆಟ್ ಅಗತ್ಯತೆಯನ್ನು ಒತ್ತಿ ಹೇಳಿವೆ. ಮೂರು ಅವಧಿಗಳಿಂದ ಪಾಲಿಕೆ ಬೊಕ್ಕಸವನ್ನು ಬಾಧಿಸುತ್ತಿದ್ದ ಆರ್ಥಿಕ ಹೊರೆ ಆಯುಕ್ತ ಸಿದ್ಧಯ್ಯ ಇಳಿಸಿದ್ದಾರೆ.
ಅಂದರೆ, ಪಾಲಿಕೆ ಆಡಳಿತಾಧಿಕಾರಿ ಕಾಲದಲ್ಲಿ ಬಜೆಟ್ ಹೊರತಾಗಿ ನೀಡಿದ್ದ ಕಾಮಗಾರಿಗಳ ಅಕ್ರಮ ಕೋಡ್ ಪತ್ತೆ ಹಚ್ಚಿದ್ದರು. ಅಕ್ರಮ ಕಾಮಗಾರಿಗಳಿಗೆ ಬಿಲ್ಪಾವತಿಸಿದ್ದನ್ನು ಗುರುತಿಸಿದ್ದರು. ಈ ಕೆಲಸವನ್ನು ಸಿದ್ದಯ್ಯ ಈ ಹಿಂದೆ ಪಾಲಿಕೆಯಲ್ಲಿ ಆಯುಕ್ತರಾಗಿದ್ದಾಗಲೇ ಕೈಗೊಂಡಿದ್ದರಾದರೂ ಅದೂ ಪೂರ್ಣವಾಗಿರಲಿಲ್ಲ. ಆದರೆ, ಎರಡನೇ ಬಾರಿಗೆ ಆಯುಕ್ತರಾಗಿ ಬಂದ ನಂತರ ಆದೀಗ ಪರಿಪೂರ್ಣವಾಗಿದೆ.
ಆಡಳಿತಾಧಿಕಾರಿಗಳ ಕಾಲದ ಅರ್ಥಿಕ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸರಿಪಡಿಸಿದ್ದು, ಇದರ ಪರಿಣಾಮ ಆರ್ಥಿಕ ಸ್ಥಿತಿ ತಕ್ಕಮಟ್ಟಿಗೆ ಸುಧಾರಿಸುತ್ತಿದೆ. ಆದ್ದರಿಂದ ಮುಂದಿನ ಮೇಯರ್ ಆಡಳಿತ ವಾಸ್ತವ ಬಜೆಟ್ ಮಂಡಿಸಿದರೆ ಮಾತ್ರ ಪಾಲಿಕೆಗೆ ಒಳಿತು. ಇಲ್ಲವಾದರೆ, ಪಾಲಿಕೆ ಮತ್ತಷ್ಟು ಆರ್ಥಿಕ ದುಸ್ಥಿತಿ ಎದುರಿಸಬೇಕಾಗುತ್ತದೆ ಎನ್ನುವ ಸೂಚನೆ ಈಗಲೇ ಕಾಣುತ್ತಿವೆ.
ಪರದಾಟಕ್ಕೆ ಕಾರಣ: ಬಿಬಿಎಂಪಿಯಲ್ಲಿ ಆಯುಕ್ತ ಸುಬ್ರಮಣ್ಯ ಇದ್ದಾಗ ಬಜೆಟ್ನಲ್ಲಿ ಪ್ರಸ್ತಾಪಿಸದೆ  ಕೋಟ್ಯಂತರ ರು.ಗಳ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದರು.
ನಂತರ 10ಸಾವಿರ ಕೋಟಿಗಳಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಕೋಡ್ ನೀಡಿದ್ದರು. ಇವರ ನಂತರ ಆಯುಕ್ತರಾಗಿ ಬಂದ ಭರತ್ಲಾಲ್ ಮೀನಾ, ಈ ಕಾಮಗಾರಿಗಳನ್ನು ರದ್ದು ಮಾಡಲು ಆಗಲಿಲ್ಲ. ಬದಲಾಗಿ ಒಂದಷ್ಟು ಕಾಮಗಾರಿಗಳನ್ನು ನಡೆಸಲು ಅನುಮತಿ ನೀಡಿದ್ದರು. ಆದರೆ, ಹಣಕಾಸಿನ ಕೊರತೆಯಿಂದಾಗಿ ಬೆರಳೆಣಿಕೆ ಕಾಮಗಾರಿಗಳು ಮಾತ್ರ ಮುನ್ನಡೆದವು.
ಆದರೂ ಅನಗತ್ಯ ಕಾಮಗಾರಿಗಳು 4000ಕೋಟಿಗಳಷ್ಟು ಉಳಿದಿದ್ದವು.  ಆ ಹೊತ್ತಿಗೆ ಮೇಯರ್ ನಟರಾಜ್ ಅವಧಿ ಆರಂಭವಾಯಿತು. ಆಗ ಬಜೆಟ್ ಮಂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್.ಸದಾಶಿವ, ಹಳೇ ಬಾಕಿ 4000ಕೋಟಿಗಳಷ್ಟು ಕಾಮಗಾರಿಗಳನ್ನೂ ಸೇರಿಸಿಕೊಂಡು ಬಜೆಟ್ ಮಂಡಿಸಿದರು. ಹೀಗಾಗಿ ಬರೀ 5000 ಕೋಟಿಗಳಲ್ಲಿ ಮುಕ್ತಾಯಗೊಳ್ಳಬೇಕಿದ್ದ 2009-10 ಸಾಲಿನ ಬಜೆಟ್ ರು. 8848 ಕೋಟಿಗೇರಿತ್ತು. ಅಂದರೆ, ಇದರಲ್ಲಿ ವಾಸ್ತವ ಬಜೆಟ್ 5000ಕೋಟಿ ಆಗಿದ್ದರೆ, ಹಿಂದಿನ ಬಾಕಿ ಬಜೆಟ್ 4000ಕೋಟಿ ಆಗಿತ್ತು.  ಈ ಬಾಕಿ ಬಜೆಟ್ ಮುಂದಿನ ವರ್ಷಗಳ ಬಜೆಟ್ನಲ್ಲೂ ಮುಂದುವರಿಯುತ್ತಾ ಬಂತು. ಇದನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮುನೀಂದ್ರಕುಮಾರ್, ಬಜೆಟ್ ಮಂಡಿಸುವ ಮುನ್ನ ಸರಿಪಡಿಸುತ್ತೇನೆಂದರು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಮುಖಂಡರ ನಡುವೆ ಮಾರಾಮಾರಿ
ಮಾಗಡಿ: ಉಭಯ ವೇದಿಕೆಗಳ ಮುಖಂಡರ ನಡುವೆ ನಡೆದ ಮಾರಾಮಾರಿಯಿಂದ ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಸಂಜೆ ನಡೆದಿದೆ. ಕಸ್ತೂರಿ ಕನ್ನಡ ಜನಪರ ವೇದಿಕೆ ಮತ್ತು ವಿಶ್ವ ಪರಿಸರ ಸಂರಕ್ಷಣಾ ವೇದಿಕೆ ಮುಖಂಡರ ನಡುವೆ ನಡೆದ ಮಾರಾಮಾರಿ ಘಟನೆಗೆ ಹಲವರು ಸಾಕ್ಷಿಯಾದರು. ಒಂದು ವೇದಿಕೆಯ ಗುಂಪು ಮತ್ತೊಂದು ವೇದಿಕೆಯ  ಫ್ಲೆಕ್ಸ್ಬೋರ್ಡ್ ಧ್ವಂಸ ಮಾಡಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಶ್ವ ಪರಿಸರ ಸಂರಕ್ಷಣಾ ವೇದಿಕೆಯ ಗಿರೀಶ್, ಪುರುಷೋತ್ತಮ, ಗೋಪಾಲ್ ಮತ್ತು ಕಸ್ತೂರಿ ಕನ್ನಡ ಜನಪರ ವೇದಿಕೆ ಪಾಪಣ್ಣ, ಪ್ರಕಾಶ್, ಕೃಷ್ಣಮೂರ್ತಿ ನಡುವೆ ಮರಾಮಾರಿ ನಡೆದಿದೆ ಎನ್ನಲಾಗಿದ್ದು,  ಗಾಯಾಳುಗಳು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಗಡಿ ಪಿಎಸ್ಐ ಧರ್ಮೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಳುಗಳಿಂದ ಮಾಹಿತಿ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.

ಶ್ರೀರಾಮುಲು ಬಂಧನಕ್ಕೆ ಖಂಡನೆ
ಆನೇಕಲ್ಲು: ಬಿಎಸ್ ಆರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ ಶ್ರೀರಾಮುಲು ಅವರ ಬಂಧನವನ್ನು ಖಂಡಿಸಿ ಆನೇಕಲ್ ಭಾಗದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ಬಿಎಸ್ಆರ್ ಪಕ್ಷದ ಎಸ್ಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಮಾತನಾಡಿ ಬಳ್ಳಾರಿಯ ಹಾದಿ ಬದಿಯಲ್ಲಿ ವ್ಯಾಪಾರ ನಡೆಸುವ ಬಡ ಜನರು ತುತ್ತಿನ ಚೀಲ ತುಂಬಿಸಿಕೊಳ್ಳಲು ದಿನವಿಡೀ ದುಡಿಯುತ್ತಾರೆ. ಜಿಲ್ಲಾಧಿಕಾರಿಗಳು ಒತ್ತಡ ತಂತ್ರಕ್ಕೆ ಮಣಿದು ಬಡ ಜನತೆಯ ಮೇಲೆ ಗದಾ ಪ್ರಹಾರ ಮಾಡುತ್ತಿದ್ದಾರೆ. ನ್ಯಾಯ ಕೇಳಲು ಧರಣಿ ಕುಳಿತ ರಾಜ್ಯಾಧ್ಯಕ್ಷರನ್ನು ಬಂಧಿಸಿ ಸಂವಿಧಾನಾತ್ಮಕ ಅಪಚಾರ ಮಾಡಿದ್ದಾರೆ ಎಂದು ದೂಷಿಸಿದರು.  ನೊಸೆನೂರು ರವಿಚಂದ್ರ ಮಾತನಾಡಿ ಶ್ರೀರಾಮುಲು ಬಂಧನದಿಂದ  ಒಳ್ಳೆಯದಾಗುತ್ತದೆ. ಜನರ ನಡುವೆ ಇರುವ ನಾಯಕರನ್ನು ಯಾರು ಕಡೆಗಣಿಸಬಾರದು ಎಂದು ಎಚ್ಚರಿಕೆಯನ್ನು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com