ಬೆಂಗಳೂರು: ಅಯ್ಯೋ ಗಬ್ಬು ವಾಸನೆ, ಇನ್ನು ಯಾವತ್ತೂ ಈ ಕಡೆ ಮುಖ ಹಾಕುವುದಿಲ್ಲ..!
ಇದು ನಗರದ ಯಶವಂತಪುರದ ರೇಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಅಪ್ಪಿತಪ್ಪಿ ಸುರಂಗ ಮಾರ್ಗ ಬಳಿಸಿದರೆ ಹೇಳುವ ಮಾತು.
ಇಲ್ಲಿ ಕಾಲಿಟ್ಟವರಿಗೆ ಕೊಳಚೆ ನೀರು, ದುರ್ವಾಸನೆ, ಎಂದೂ ಉರಿಯದ ವಿದ್ಯುತ್ ದೀಪ, ಕಸದ ರಾಶಿ, ಪುಂಡು ಪೋಕರಿಗಳ ದರ್ಶನದ ಭಾಗ್ಯ ದೊರೆಯುತ್ತದೆ. ಇಷ್ಟೇ ಅಲ್ಲದೆ ಅನೈತಿಕ ಚಟುವಟಿಕೆಗೆ ಸೂತ್ರ ಹೆಣೆಯುವ ಕೆಲಸವನ್ನೂ ಈ ಸುರಂಗ ಮಾರ್ಗ ಮಾಡುತ್ತಿದೆ. ಮುಗ್ಧರು ಸಭ್ಯಸ್ಥರು ಒಳಗೆ ಹೋದರೆ ಮುಗಿಯಿತು ಕಥೆ, ಓಡಾಡಲು ಬೇಕಾದ ಯಾವುದೇ ಸೌಲಭ್ಯ ಇಲ್ಲಿ ಮರೀಚಿಕೆ.
ಈ ಸುರಂಗ ಮಾರ್ಗದಲ್ಲಿ ನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಆದರೆ, ಅಂಡರ್ಪಾಸ್ ಮಾತ್ರ ಎಲ್ಲಾ ಸೌಲಭ್ಯಗಳಿಂದ ವಂಚಿತ. ಇಲ್ಲಿ ದೀಪಗಳು ಇವೆಯಾದರೂ ಅವು ಬೆಳಗಿದ್ದನ್ನು ಕಂಡವರಿಲ್ಲ. ಜೊತೆಗೆ ಕಸ, ಸೊಳ್ಳೆಗಳ ಹಾವಳಿ. ಇನ್ನು ಮಳೆಗಾಲದಲ್ಲಿ ಒಳಚರಂಡಿ ನೀರು ನೇರವಾಗಿ ಸುರಂಗ ಮಾರ್ಗಕ್ಕೆ ನುಗ್ಗುತ್ತದೆ. ಆಗ ಜನ ಮೂಗು ಮುಚ್ಚಿಕೊಂಡೇ ಇಲ್ಲಿ ಓಡಾಡಬೇಕು. ಇದರ ಹೊರಗಿರುವ ಫುಟ್ಪಾತ್ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ಹಾಸಿರುವ ಚಪ್ಪಡಿಗಳು ಕಿತ್ತುಹೋಗಿವೆ. ಸಾರ್ವಜನಿಕರು ಇಲ್ಲೇ ಮೂತ್ರ ವಿಸರ್ಜನೆಗೆ ಜಾಗ ಹುಡುಕಿಕೊಂಡಿದ್ದಾರೆ. ಹೀಗಾಗಿ ದುರ್ವಾಸನೆ ಮೂಗಿಗೆ ರಾಚುತ್ತದೆ.
ನಗರದ ಸಬ್ವೇಗಳ ದುಸ್ಥಿತಿಯ ಬಗ್ಗೆ ಕನ್ನಡಪ್ರಭ ಪತ್ರಿಕೆ ಕೆಲವೇ ದಿನಗಳ ಹಿಂದೆ ಸರಣಿ ಲೇಖನ ಪ್ರಕಟಿಸಿತ್ತು. ಆದರೂ ಬಿಬಿಎಂಪಿ ಅಧಿಕಾರಿಗಳು ಈ ಸುರಂಗ ಮಾರ್ಗ ಬಗ್ಗೆ ಏಕೋ ಏನೋ ಗಮನ ಹರಿಸಿಲ್ಲ.
ಮಾರ್ಗದಲ್ಲಿ ಕೊಳಕು ನೀರು: ಸಬ್ವೇ ಒಳಗಿನ ಕಾಲುದಾರಿನ್ನು ಬಿಬಿಎಂಪಿಯೇ ಮಾಡಿತ್ತು. ಆದರೆ ಈ ಕಾಮಗಾರಿಯಿಂದ ಮಾರ್ಗದಲ್ಲಿ ಹಾದು ಹೋದ ಒಳಚರಂಡಿಯ ಕೊಳವೆ ಮಾರ್ಗ ಒಡೆದಿದೆ. ಇದರಿಂದ ಸುರಂಗದಲ್ಲಿ ಹಲವು ತಿಂಗಳುಗಳಿಂದ ಕೊಳಕು ನೀರು ನಿಂತಿದ್ದು ದುರ್ನಾತ ಬೀರುತ್ತಿದೆ.
ಹತ್ತದ ಲೈಟ್ಗಳು: ದೀಪಗಳು ಬೆಳಗದ ಕಾರಣ ಇಲ್ಲಿ ಕತ್ತಲಲ್ಲೇ ಓಡಾಡಬೇಕು. ಬಿಬಿಎಂಪಿ ಹಾಕಿದ ದೀಪಗಳು ರಾತ್ರಿ ಕುಡಿದು ಬಂದ ಪುಂಡರ ಕೈಚಳಕಕ್ಕೆ ಒಳಗಾಗುತ್ತಿವೆ.
ಇದನ್ನು ತಿಳಿದ ಅಲ್ಲೇ ವ್ಯಾಪಾರ ಮಾಡುವ ಕೆಲವರು ಬಿಬಿಎಂಪಿಗೂ ದೂರು ನೀಡಿದ್ದಾರೆ. ಆದರೂ ಯಾವುದೆ ಪ್ರಯೋಜನ ಇಲ್ಲದ ಕಾರಣ ಅವರೇ ಒಂದು ಚಿಕ್ಕ ದೀಪವನ್ನು ಹಾಕಿದ್ದಾರೆ.
ಮಹಿಳೆರಿಗೆ ನೋ ಎಂಟ್ರಿ: ಈ ಸುರಂಗ ಮಾರ್ಗದಲ್ಲಿ ಒಂಟಿ ಮಹಿಳೆಯರಿಗೆ ನೋ ಎಂಟ್ರಿ. ಅವರೇನಾದರು ಬಂದರೆ ಸುರಕ್ಷಿತವಾಗಿ ಹೋಗುವು ಬಗ್ಗೆ ಖಾತರಿ ಇಲ್ಲ. ಅಷ್ಟರ ಮಟ್ಟಿಗೆ ಪುಂಡರ ಹಾವಳಿ ಮಿತಿ ಮೀರಿದೆ. ದಿನನಿತ್ಯ ಸಾವಿರಾರು ಸಾರ್ವಜನಿಕರು ಇಲ್ಲಿ ಓಡಾಡುತ್ತಾರೆ. ಆದರೆ ಶೌಚಾಲಯಕ್ಕೆ ಹೋಗಬೇಕಾದರೆ ರೇಲ್ವೆ ನಿಲ್ದಾಣದ ಒಳಗೆ ಹೋಗಬೇಕು. ಹೀಗಾಗಿ ಫುಟ್ಪಾತೆ ಶೌಚಾಲಯವಾಗಿದೆ.
ಇಲ್ಲಿ ಕಸ ಹಾಕುವುದಕ್ಕೆ ಒಂದು ತೊಟ್ಟಿ ಇಲ್ಲ. ಸಾರ್ವಜನಿಕರು, ವ್ಯಾಪಾರಿಗಳು ಹಾಕಿದ ತ್ಯಾಜ್ಯ ಇಲ್ಲಿಯೇ ಬಿದ್ದು ಒದ್ದಾಡುತ್ತದೆ. ಪೌರಕಾರ್ಮಿಕರೂ ಕೂಡ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗವ ಅಂಡರ್ ಪಾಸ್ ಹಾಗೂ ಫುಟ್ಪಾತ್ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಇಷ್ಟಾದರೂ ಬಿಬಿಎಂಪಿ ಇದರ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸ.
---
ಸಮಸ್ಯೆ ಇರುವುದು ನಿಜ. ರೇಲ್ವೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಅಡ್ಡಿ ಪಡಿಸುತ್ತಿದ್ದಾರೆ. ಈ ಸಬ್ವೇ ಒಳಗಡೆ ಫುಟ್ಪಾತ್ ಮಾಡಲು 10 ಲಕ್ಷ ವೆಚ್ಚ ಮಾಡಿದ್ದೇವೆ. ಹಿಂಬದಿಯ ಗೋಡೆ ಕುಸಿದು ಮತ್ತೆ ಹಾಳಾಗಿದೆ. ಮಾರ್ಗದ ಹೊರಗಿರುವ ಪಾದಾಚಾರಿ ಮಾರ್ಗವನ್ನು ದುರಸ್ಥಿಗೊಳಿಸಲು 10 ಲಕ್ಷ ಕೇಳಿದ್ದೇವೆ ವರ್ಕ್ ಅರ್ಡರ್ ಇನ್ನೂ ಕೊಟ್ಟಿಲ್ಲ. ಇದರ ಮಧ್ಯೆ ಜಂಟಿ ಆಯುಕ್ತರ ಕಚೇರಿಯವರು ಈ ಕಡತವನ್ನು ಕಳೆದು ಹಾಕಿದ್ದಾರೆ. ಹೀಗಾಗಿ ಕೆಲಸ ಸ್ವಲ್ಪ ವಿಳಂಬವಾಗುತ್ತಿದೆ.
-ಎನ್. ಜಯಪಾಲ್. ಬಿಬಿಎಂಪಿ ಸದಸ್ಯ
ಇಲ್ಲಿನ ಪರಿಸ್ಥಿತಿ ನೋಡಿದರೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಸಿಟ್ಟು ಬರುತ್ತೆ. ಮಹಿಳೆಯರು, ಹೆಣ್ಣುಮಕ್ಕಳು ಓಡಾಡುವ ಹಾಗಿಲ್ಲ. ಇರುವ ಲೈಟ್ಗಳು ಉರಿಯುತ್ತಿಲ್ಲ. ಅಧಿಕಾರಿಗಳಿಗೆ ಗೊತ್ತಿದು,್ದ ತಿಳಿಯದಂತೆ ಸುಮ್ಮನಾಗಿದ್ದಾರೆ.
-ರಾಘವೇಂದ್ರ, ಪಾದಾಚಾರಿ
ಸುಮಾರು ಒಂದು ವರ್ಷದಿಂದ ಈ ಅಂಡರ್ಪಾಸ್ನಲ್ಲಿ ಓಡಾಡುತ್ತಿದ್ದೇನೆ. ಮೊದಲು ಸರಿಯಾಗೆ ಇತ್ತು. ಆದರೆ ಸುಮಾರು ಮೂರು ತಿಂಗಳಿಂದ ಸಬ್ವೇ ಗಬ್ಬು ವಾಸನೆ ಹೊಡೆಯುತ್ತಿದೆ. ಯಾವ ಅಧಿಕಾರಿಗಳಿಗೂ ಇದರ ಬಗ್ಗೆ ಕಾಳಜಿ ಇಲ್ಲ. ಇಲ್ಲಿ ಹೋದರೆ ವಾಂತಿ ಬರುತ್ತೆ.
-ಲಿಂಗರಾಜು, ಪಾದಾಚಾರಿ
- ವಿಜಯ್ ಹೊಸನಗರ