ಮಹಿಳೆಯರ ಸರ ದೋಚಿದ ಕಳ್ಳರು

Updated on: 

ಕ.ಪ್ರ.ವಾರ್ತೆ  ಬೆಂಗಳೂರು ಮಾ.27-
ನಗರದ ಪ್ರತ್ಯೇಕ ಬಡಾವಣೆಗಳಲ್ಲಿ ದುಷ್ಕರ್ಮಿಗಳು ಮಂಗಳವಾರ ಮೂವರು ಮಹಿಳೆಯರ ಚಿನ್ನದ ಸರ ದೋಚಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸರ ದೋಚಲು ಯತ್ನಿಸಿದ ದುಷ್ಕರ್ಮಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಘಟನೆ1- ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ದೋಚಿರುವ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ರಾಮಯ್ಯ ಬಡಾವಣೆ 3ನೇ ಕ್ರಾಸ್ ನಿವಾಸಿ ಮಧುಮಿತ(29) ಸರ ಕಳೆದುಕೊಂಡವರು.  ಆವನೂರು ಬಳಿ ಘಟನೆ ನಡೆದಿದೆ. ವಿಳಾಸ ಕೇಳುವ ನೆಪದಲ್ಲಿ ಬಂದ ಕಳ್ಳ 40 ಗ್ರಾಂ. ಸರ ದೋಚಿ, ಮತ್ತೊಬ್ಬ ಕಳ್ಳನ ಜೊತೆ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ. ಆ ವೇಳೆ ಸ್ಥಳದಲ್ಲಿ ಜನರಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ ಎಂದು ಮಧುಮಿತ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ2- ನಾಗಲಕ್ಷ್ಮಿ ಎಂಬುವವರು ಮಗನನ್ನು ಮನೆಪಾಠಕ್ಕೆ ಬಿಟ್ಟು ಹಿಂತಿರುಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ 70 ಗ್ರಾಂ ತೂಕದ ಸರ ದೋಚಿದ್ದಾನೆ.  ನಾಗಲಕ್ಷ್ಮಿ ಎಚ್‌ಎಎಲ್ ನೌಕರರಾಗಿದ್ದು, ಜಿಬಿಜೆ ವಸತಿ ಗೃಹದಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಎಚ್‌ಎಎಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ3- ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ  ವೀಣಾ ಎಂಬುವವರ ಸರ ದೋಚಲಾಗಿದೆ. ಅವರು ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬದಿಯಿಂದ ಬಂದ ಇಬ್ಬರು 30 ಗ್ರಾಂ ತೂಕದ ಸರ ದೋಚಿದ್ದಾರೆ.
ಘಟನೆ4- ವಿವೇಕನಗರದ ನಿವಾಸಿ ಅರ್ಪಿತಾ ಭಟ್ಟಾಚಾರ್ಯ ಎಂಬುವವರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ದಷ್ಕರ್ಮಿಯೊಬ್ಬ ಸರ ದೋಚಿದ್ದಾನೆ. ಬಳಿಕ ಪೊಲೀಸರು ಕಳ್ಳನನ್ನು ಬಂಧಿಸಿ ಸರ ವಾಪಸ್ ಕೊಡಿಸಿದ್ದಾರೆ. ಈಜಿಪುರ 20ನೇ ತಿರುವಿನ ಬಳಿ ಘಟನೆ ನಡೆದಿದೆ. ಎದುರಿನಿಂದ ಬಂದ ಯುವಕನೊಬ್ಬ ಚಾಕು ತೋರಿಸಿ ಬೆದರಿಸಿ ಸರ ದೋಚಿದ. ಅಷ್ಟರಲ್ಲಿ ಆಕೆ ಕಿರುಚಾಡಿದರು. ಅಲ್ಲಿ ನೆರೆದಿದ್ದ ಸ್ಥಳೀಯರು ಆತನನ್ನು ಹಿಡಿದು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದರು. ನಂತರ ಆತ ದೋಚಿದ್ದ ಸರವನ್ನು ಮಹಿಳೆಗೆ ವಾಪಸ್ ಕೊಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com