ಚಿಂತಾಮಣಿ: ನಾಯಿಗಳು ಕುರಿಗಳ ಹಿಂಡಿನ ಮೇಲೆ ದಾಳಿ ಮಾಡಿ 10 ಕುರಿಗಳನ್ನು ಕೊಂದು 5 ಕುರಿಗಳನ್ನು ಗಾಯಗೊಳಿಸಿರುವ ಘಟನೆ ಚಿಂತಾಮಣಿ ತಾಲೂಕಿನ ಕುರುಬೂರು ಗ್ರಾಮದಿಂದ ವರದಿಯಾಗಿದೆ. ಶುಕ್ರವಾರ ಎಂದಿನಂತೆ ಕುರಿಗಳನ್ನು ಹಿಂಡಿಯಲ್ಲಿ ಭದ್ರಪಡಿಸಿ ಮಲಗಿದ್ದ ವೇಳೆ ನಾಯಿಗಳು ಕಿಂಡಿನೊಳಗೆ ಪ್ರವೇಶಿಸಿ 10 ಕುರಿಗಳನ್ನು ಕೊಂದು ತಿಂದಿದ್ದು, 5 ಕುರಿಗಳನ್ನು ಗಾಯಗೊಳಿಸಿವೆ. ಶನಿವಾರ ಬೆಳಿಗ್ಗೆ ಮಾಲೀಕ ರಾಮಚಂದ್ರ ಕುರಿಗಳು ಸತ್ತಿರುವುದನ್ನು ಕಂಡು ಸುತ್ತಮತ್ತಲಿನವರನ್ನು ಕೂಗಿಕೊಂಡ ತಕ್ಷಣ ನಾಯಿಗಳು ಕಾಲ್ಕಿತ್ತವೆಂದು ವಿವರಿಸಿದ್ದಾರೆ. ರೈತನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಕುರಿಗಳ ಸಾವಿನಿಂದ ಸುಮಾರು 50 ಸಾವಿರ ರೂ.ಗಳ ನಷ್ಟವುಂಟಾಗಿದ್ದು ರೈತನ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ.
ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತನಿಗೆ ಸೂಕ್ತ ಪರಿಹಾರ ದೊರಕಿಸುವುದರ ಜೊತೆಗೆ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೌಲಭ್ಯ ಕೊಡದಿದ್ರೆ ಮತ ಹಾಕಲ್ಲ!
ಕೊಪ್ಪಳ: ಅನೇಕ ವರ್ಷಗಳಿಂದ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ನದಿ ದಡದಲ್ಲಿದ್ದರೂ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ನಮ್ಮ ಪಾಡು ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಪ್ರತಿ ಚುನಾವಣೆಗೂ ಮುನ್ನ ನೀಡುವ ಭರವಸೆ ಈಡೇರುವುದಿಲ್ಲ. ಆದ್ದರಿಂದ ಗ್ರಾಮಸ್ಥರು ಮತದಾನ ಮಾಡದಿರಲು ನಿರ್ಧರಿಸಿದ್ದೇವೆ. ಇದು, ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮಸ್ಥರು ಶನಿವಾರ ತಹಸೀಲ್ದಾರ್ಗೆ ಸಲ್ಲಿಸಿರುವ ಮನವಿ ಸಾರಾಂಶ. ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 5 ಸಾವಿರ ಮತದಾರರಿದ್ದಾರೆ. ಆದರೂ ಮೂಲ ಸೌಕರ್ಯಗಳಿಲ್ಲ. ನದಿ ದಡದಲ್ಲಿಯೇ ಇದ್ದರೂ ಏತ ನೀರಾವರಿ ಬಿಸಿಲ್ಗುದುರೆಯಾಗಿದೆ. ಸರಿಯಾಗಿ ಕುಡಿಯುವ ನೀರು ಪೂರೈಸದ ಕಾರಣ ಪ್ಲೋರೈಡ್ಯುಕ್ತ ಬೋರ್ವೆಲ್ ನೀರು ಕುಡಿಯುತ್ತಿದ್ದೇವೆ. ಇದರಿಂದ ಅನೇಕ ಮಕ್ಕಳು ಬುದ್ಧಿಮಾಂದ್ಯರಾಗಿದ್ದು, ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಸ್ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ದೊರೆಯುತ್ತಿಲ್ಲ. ಈ ಬಗ್ಗೆ ಸಾಕಷ್ಟು ಸಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಪರಭಾಷಾ ನಟರಿಂದ ಮತಯಾಚಿಸಿದರೆ ಕಲ್ಲೇಟು
ಹಾಸನ: ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಗಮನ ಸೆಳೆಯಲು ಪರಭಾಷೆ ನಟರನ್ನು ಕನ್ನಡ ನಾಡಿಗೆ ಕರೆತಂದು ಬೇರೆ ಭಾಷೆಯಲ್ಲಿ ಭಾಷಣ ಮಾಡಿಸಿ ಮತಯಾಚಿಸಿದರೆ ಕರವೇ ಕಾರ್ಯಕರ್ತರಿಂದ ಅಂತಹ ವೇದಿಕೆ ಮೇಲೆ ಕಲ್ಲು ಬೀಳಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್.ನಾರಾಯಣಗೌಡ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ.5 ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಗಮನ ಸೆಳೆಯಲು ಪರಭಾಷೆ ನಟರನ್ನು ಕನ್ನಡನಾಡಿಗೆ ಕರೆಸಿ ಭಾಷಣ ಅವರ ತಾಯಿಭಾಷೆಯಲ್ಲಿ ಮಾತನಾಡುವುದು ಕಂಡು ಬಂದರೆ ಕರವೇ ಕಾರ್ಯಕರ್ತರು ವೇದಿಕೆ ಮೇಲೆ ಕಲ್ಲು ತೂರಲಿದ್ದಾರೆ. ಪರಭಾಷಾ ನಟರನ್ನು ಕರೆಸುವ ಮೂಲಕ ರಾಷ್ಟ್ರೀಯ ಪಕ್ಷಗಳು ಕನ್ನಡಕ್ಕೆ ಅವಮಾನ ಮಾಡುತ್ತಿವೆ ಎಂದು ಆರೋಪಿಸಿದರು. ಕರವೇ ಜಿಲ್ಲಾಧ್ಯಕ್ಷ ರವೀಂದ್ರಕುಮಾರ್ ಇತರರು ಇದ್ದರು.
ನಾಲ್ಕು ಮರಿಗೆ ಜನ್ಮ ನೀಡಿದ ಕುರಿ!
ಕೆ.ಆರ್. ನಗರ: ಇಲ್ಲಿನ ತರಕಾರಿ ವ್ಯಾಪಾರಿ ಅನ್ಸರ್ಪಾಷ ಅವರು ಸಾಕಿರುವ ಕುರಿಯು ಶನಿವಾರ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಒಂದು ಬಾರಿ ಮೂರು, ಮತ್ತೊಂದು ಬಾರಿ ನಾಲ್ಕರಂತೆ ಒಟ್ಟು 14 ಮರಿಗಳಿಗೆ ಜನ್ಮ ನೀಡಿದೆ. ನಗರದ ಮುಸ್ಲಿಂ ಬಡಾವಣೆಯ ಅನ್ಸರ್ಪಾಷ ವಿವಿಧ ತಳಿಯ ಕುರಿಗಳನ್ನು ಸಾಕುವ ಹವ್ಯಾಸವನ್ನು ಹಲವಾರು ವರ್ಷಗಳಿಂದ ರೂಢಿಸಿಕೊಂಡಿದ್ದು, ಈ ಕುರಿಯನ್ನು ಕಾಶ್ಮೀರದಿಂದ ತರಲಾಗಿತ್ತು. ತನ್ನ ತರಕಾರಿ ಅಂಗಡಿಯಲ್ಲಿ ಅಳಿದುಳಿದ ತರಕಾರಿಗಳನ್ನು ಕುರಿಗಳಿಗೆ ಆಹಾರವಾಗಿ ನೀಡುವುದರ ಜೊತೆಗೆ, ಆಗಾಗ ಪಶು ವೈದ್ಯರಿಂದ ಸಲಹೆ ಪಡೆದು ಅವರ ನಿರ್ದೇಶನದಂತೆ ಕುರಿಗಳನ್ನು ಸಾಕುತ್ತ ಬಂದಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ನಡೆಯುವ ಜಾನುವಾರು ಜಾತ್ರೆಗಳಲ್ಲಿ ತನ್ನ ಸಾಕು ಕುರಿಗಳನ್ನು ಪ್ರದರ್ಶನ ಮಾಡಿ ಬಹುಮಾನ ಪಡೆದಿದ್ದಾರೆ.
'ಕುರ್ಚಿ, ಪೀಠ ಸರಿ ಮಾಡಬೇಕು'
ಚಿಂತಾಮಣಿ: ರಾಜಕೀಯ ಕುರ್ಚಿ ಮತ್ತು ಮಠ ಪೀಠಗಳನ್ನು ಸರಿ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೆಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ವಿ.ಗೋಪಾಲಗೌಡರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಣ ಬಲದಿಂದ ಶಾಸಕ ಅಥವಾ ಸಂಸದ ಆಗಲು ಸಾಧ್ಯ. ಆದರೆ, ಒಂದು ಪುಟ್ಟ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದು ದೆಹಲಿಯ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗುವುದು ವಿ.ಗೋಪಾಲಗೌಡರಂತಹ ವ್ಯಕ್ತಿಗಳ ಶ್ರಮದಿಂದ ಮಾತ್ರ ಸಾಧ್ಯವೆಂದು ನುಡಿದರು. ಸ್ವಾರ್ಥಕ್ಕಾಗಿ ದೇಶ ಹಾಳು ಮಾಡಲು ಮುಂದಾಗುತ್ತಿರುವ ಸಮಾಜ ಘಾತಕ ಶಕ್ತಿಗಳನ್ನು ದಮನ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿನ ಮಹತ್ವದ ಪಾತ್ರ ಅಗತ್ಯವಿದೆ. ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.