ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸುತ್ತಿರುವ ರಾಜಧಾನಿ ನಗರದ ಕೆಲವೆಡೆ ಭಾನುವಾರ ರಾತ್ರಿ ಸುರಿದ ಮಳೆ ತಂಪೆರೆಯಿತು. ರಾತ್ರಿ 9.30ರ ನಂತರ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಬಿದ್ದಿದ್ದು, ತಣ್ಣನೆಯ ವಾತಾವರಣ ನಿರ್ಮಾಣ ಮಾಡಿತ್ತು.
ಆದರೆ, ಏಕಾಏಕಿ ಮಳೆ ಬಂದಿದ್ದರಿಂದ ದ್ವಿಚಕ್ರ ವಾಹನ ಸವಾರರು ವಾಹನ ಓಡಿಸಲು ಸಾಧ್ಯವಾಗದೆ ರಸ್ತೆ ಬದಿ ಕಾದುಮಳೆ ನಿಂತ ಬಳಿಕ ತಮ್ಮ ಮನೆಗಳಿಗೆ ತೆರಳಿದರು. ಕೆಲವೆಡೆ ವಾಹನ ಸಂಚಾರವೂ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ಝಳ ಹೆಚ್ಚಾಗಿದ್ದು, ತಾಪಮಾನ 36 ಡಿಗ್ರಿ ಸೆಲ್ಷಿಯಸ್ ದಾಟಿತ್ತು. ವಾತಾವರಣದಲ್ಲಿ ಉಂಟಾಗಿರುವ ಈ ಉಷ್ಣತೆಯೇ ಭಾನುವಾರ ಮಳೆಗೆ ಕಾರಣ ಎನ್ನಲಾಗಿದೆ.
ಭಾನುವಾರ ಬೆಳಗ್ಗಿನಿಂದ ಬಿಸಿಲಿನ ಜತೆಗೆ ಮೋಡ ಕವಿದ ವಾತಾವರಣವೂ ಆಗಾಗ್ಯೆ ಕಾಣಿಸಿಕೊಳ್ಳುತ್ತಿತ್ತು. ಇನ್ನೆರಡು ದಿನಗಳಲ್ಲಿ ಮಳೆ ಬರುವ ಮುನ್ಸೂಚನೆಯನ್ನೂ ನೀಡಿತ್ತು. ಆದರೆ, ಕೆಲವೆಡೆ ಭಾನುವಾರ ರಾತ್ರಿಯೇ ಮಳೆ ಬಿದ್ದಿದೆ.