ವಸತಿಯೋ? ಶಿಕ್ಷಣವೋ?

Updated on: 

ಬೆಂಗಳೂರು: ಮನೆಯಿಂದ ಕಾಲೇಜು ದೂರಾಗುತ್ತೆ ಅಂತ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಿಂದಲೇ ತರಗತಿ ದೂರ!
ಬೆಂಗಳೂರು ವಿಶ್ವವಿದ್ಯಾಲಯದ 13 ವಿಭಾಗಗಳು ಸೆಂಟ್ರಲ್ ಕಾಲೇಜಿನ ಆವರಣಲ್ಲಿದ್ದು, ಹಾಸ್ಟೆಲ್ ಮಾತ್ರ ಬೆಂವಿವಿ ಜ್ಞಾನಭಾರತಿ ಆವರಣದಲ್ಲಿದೆ! ಅಂದರೆ ತರಗತಿಗೂ ಹಾಸ್ಟೆಲ್ಗೂ ಕನಿಷ್ಠ 13-14 ಕಿ.ಮೀ. ದೂರ. ತರಗತಿಯಿಂದ ಇಷ್ಟು ದೂರದಲ್ಲಿರುವ ಹಾಸ್ಟೆಲ್ ಇನ್ನೊಂದಿಲ್ಲ.
ಎಂ.ಕಾಂ, ಎಂಬಿಎ, ರಸಾಯನಶಾಸ್ತ್ರ, ವಿದ್ಯುನ್ಮಾನ ವಿಭಾಗ, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗ, ಅಪೆರಲ್ ಮತ್ತು ಫ್ಯಾಷನ್ ಟೆಕ್ನಾಲಜಿ, ಬಯೋ ಕೆಮಿಸ್ಟ್ರಿ, ಹಣಕಾಸು ನಿರ್ವಹಣೆ, ಗಣಿತ ವಿಭಾಗ, ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್, ವಿದೇಶಿ ಭಾಷೆ, ಕಂಪ್ಯೂಟರ್ ಸೈನ್ಸ್, ಮಾಸ್ಟರ್ ಆಫ್ ಟೂರಿಸಂ ಆ್ಯಂಡ್ ಅಡ್ಮಿನಿಸ್ಟ್ರೇಷನ್ ವಿಭಾಗಗಳು ಸೆಂಟ್ರಲ್ ಕಾಲೇಜಿನಲ್ಲಿವೆ. ಈ ಎಲ್ಲ ವಿಭಾಗಗಳ 350 ವಿದ್ಯಾರ್ಥಿಗಳು ಜ್ಞಾನಭಾರತಿಯಿಂದ ಸಾರ್ವಜನಿಕ ಸಾರಿಗೆಯಲ್ಲಿ ಸೆಂಟ್ರಲ್ ಕಾಲೇಜು ತಲುಪುವ ವೇಳೆಗೆ ಹೈರಾಣಾಗುತ್ತಾರೆ.

ನಿತ್ಯ ಊಟವಿಲ್ಲ: ಬೆಳಗ್ಗೆ 10.30ಕ್ಕೆ ತರಗತಿ ಆರಂಭವಾಗುತ್ತದೆ. ಸರಿ ಸಮಯಕ್ಕೆ ಹೋಗಬೇಕಾದರೆ ಬೆಳಗ್ಗೆ 8 ಗಂಟೆಗೇ ಹೊರಡಬೇಕು. ಆದರೆ ಹಾಸ್ಟೆಲ್ಗಳಲ್ಲಿ 8 ಗಂಟೆಗೆ ಉಪಾಹಾರ ನೀಡಲಾಗುತ್ತದೆ. ಇದಕ್ಕೆ ಕಾದರೆ ಬಸ್ ಸಿಗುವುದಿಲ್ಲ. ತಿಂಡಿ ಸಿಕ್ಕರೆ ತರಗತಿ ತಪ್ಪುತ್ತದೆ!
ಇವರು ಕಾಲೇಜು ಮುಗಿಸಿ ಮತ್ತೆ ಹಾಸ್ಟೆಲ್ ತಲುಪುವ ವೇಳೆ ಊಟದ ಸಮಯವೂ ಮೀರಿರುತ್ತದೆ. ಪರ್ಯಾಯ ವ್ಯವಸ್ಥೆಗೆ ಎಲ್ಲರಿಗೂ ಅನುಕೂಲವಿರುವುದಿಲ್ಲ.

ಸ್ಥಗಿತಗೊಂಡ ಬಸ್: ಈ ಮೊದಲು ಸೆಂಟ್ರಲ್ ಕಾಲೇಜಿನಿಂದ ಜ್ಞಾನಭಾರತಿ ಆವರಣಕ್ಕೆ ವಿವಿ ಬಸ್ಸೊಂದನ್ನು ವ್ಯವಸ್ಥೆ ಮಾಡಿತ್ತು. ಆದರೆ, ವಿವಿ ಸಾರಿಗೆ ವೆಚ್ಚದ ಹೊರೆ ಭರಿಸಲು ಸಾಧ್ಯವಾಗದೆ ಜು.1 ರಿಂದ ಬಸ್ ಸ್ಥಗಿತಗೊಂಡಿದೆ. ಈ ಅವ್ಯವಸ್ಥೆಯಿಂದ ಹಸಿದುಕೊಂಡೇ ವಿದ್ಯಾರ್ಥಿಗಳು ಹೋಗಬೇಕು. ಇದರಿಂದ ಶೈಕ್ಷಣಿಕ ಪ್ರಗತಿ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಆಸಕ್ತಿ ವಿವಿ ಆಡಳಿತಕ್ಕೆ ಇದ್ದಂತಿಲ್ಲ.
ಜ್ಞಾನಭಾರತಿ ಆವರಣಕ್ಕೆ ಸೆಂಟ್ರಲ್ ಕಾಲೇಜಿನ ವಿಭಾಗಗಳನ್ನು ಸ್ಥಳಾಂತರಿದರೆ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಊಟ ಸಿಗುತ್ತದೆ. ಇದರಿಂದ ಆಯಾಸವಿಲ್ಲದೆ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಸಂವಹನ, ವಾಣಿಜ್ಯ ಹಾಗೂ ವಿದೇಶಿ ಭಾಷಾ ವಿಭಾಗಗಳಿಗೆ ಸ್ಥಳಾಂತರಗೊಳ್ಳಲು ಹೇಳಿದ್ದರೂ ಒಪ್ಪುತ್ತಿಲ್ಲವೆನ್ನುತ್ತಾರೆ ವಿವಿ ಕುಲಸಚಿವೆ ಕೆ.ಕೆ. ಸೀತಮ್ಮ.

ಸೆಂಟ್ರಲ್ ಕಾಲೇಜಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಚೆನ್ನಾಗಿದೆ. ಸೆಂಟ್ರಲ್ ಕಾಲೇಜು ಆವರಣದಲ್ಲಿ ವಸತಿನಿಲಯ ಕಟ್ಟುವ ಚಿಂತನೆಯಿದೆ. ದೂರದಿಂದ ಬರುವವರಿಗೆ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಸಚಿವರೊಂದಿಗೆ ಮಾತಕತೆ ನಡೆದಿದೆ. ಸಾರಿಗೆ ಒತ್ತಡದ ಸಮಯದಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ.
- ಕೆ.ಕೆ. ಸೀತಮ್ಮ, ಕುಲಸಚಿವೆ, ಬೆಂಗಳೂರು ವಿಶ್ವವಿದ್ಯಾಲಯ

- ಶಶಿರೇಖಾ ಜಿ.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com