ಕನ್ನಡಪ್ರಭ ವಾರ್ತೆ ಬೆಂಗಳೂರು ಆ.2
ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅನ್ವಯ ಬೆಂಗಳೂರು ನಗರದಲ್ಲಿ ಈ ವರ್ಷ ರು. 830 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಜತೆಗೆ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಕಾಮಗಾರಿ ಆರಂಭಿಸಲಾಗುವುದು ಎಂದರು. ನಗರೋತ್ಥಾನ ಯೋಜನೆ ಅನ್ವಯ ಬೆಂಗಳೂರಿಗೆ ರು. 1000 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ ರು. 567 ಕೋಟಿ ವೆಚ್ಚದಲ್ಲಿ 329 ಹೊಸ ಕಾಮಗಾರಿ ಆರಂಭಿಸಲಾಗುವುದು ಎಂದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿರ್ಮಿಸಿದ ಯಾವುದೇ ರಸ್ತೆಗಳು ಕಿತ್ತು ಹೋಗಿಲ್ಲ. ನಗರ ವ್ಯಾಪ್ತಿಯಲ್ಲಿ ಸುಮಾರು 2000 ಕಿ ಮೀ ರಸ್ತೆ ರಿಪೇರಿ ಮತ್ತು ಹೊಸದಾಗಿ ಟಾರ್ ಹಾಕಬೇಕಿದೆ ಎಂದರು. 12 ರಸ್ತೆಯನ್ನು ರು. 200 ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ರೆಸಿಡೆನ್ಸಿ ರಸ್ತೆ, ರಿಚ್ಮಂಡ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ವಿಠಲ ಮಲ್ಯ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ ರಸ್ತೆ ಹಾಗೂ ಮ್ಯೂಸಿಯಂ ರಸ್ತೆ ಸೇರಿದಂತೆ 10.20 ಕಿಮೀ ಮೊದಲ ಹಂತದಲ್ಲಿ, ಎರಡನೇ ಹಂತದಲ್ಲಿ ಮೋದಿ ರಸ್ತೆ, ಸಿದ್ದಯ್ಯ ಪುರಾಣಿಕ್ ರಸ್ತೆ, ಕೆಂಪೇಗೌಡ ರಸ್ತೆ, ನೃಪತುಂಗ ರಸ್ತೆ, ಜಯನಗರ 11 ನೇ ಮುಖ್ಯ ರಸ್ತೆಯಲ್ಲಿ 6.37 ಕಿಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಜಾಹೀರಾತು ತೆರವು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಾಕಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಹೈಕೋರ್ಟ್ ಮತ್ತು ಲೋಕಾಯುಕ್ತದಿಂದಲೂ ಸರ್ಕಾರಕ್ಕೆ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ವರದಿ ತರಿಸಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯರಿಂದಲೂ ಒಪ್ಪಿಗೆ ದೊರೆತಿದೆ ಎಂದರು.
ವೋಲ್ವೋ ಸೇವೆಗೆ ಲಾಭ: ಕೆಎಸ್ಆರ್ಟಿಸಿಯ ವೋಲ್ವೋ ಸೇವೆ ಪ್ರಸಕ್ತ ಸಾಲಿನ ತ್ರೈಮಾಸಿಕ ವರದಿ ಪ್ರಕಾರ 3.5 ಕೋಟಿ ಲಾಭ ಗಳಿಸಿದೆ. ಮಂಡ್ಯದಲ್ಲಿ ವೋಲ್ವೋ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಸಂಬಂಧ ವರದಿ ಕೇಳಲಾಗಿದೆ. ಆಂಧ್ರದಲ್ಲಿ ನಡೆದ ದುರಂತ ಸಂಬಂಧ ಅಲ್ಲಿನ ಸರ್ಕಾರದಿಂದ ವರದಿ ಕೇಳಿದ್ದೇವೆ ಎಂದು ಅವರು ತಿಳಿಸಿದರು.
ಕೆರೆ ಒತ್ತುವರಿ ಶೀಘ್ರದಲ್ಲೇ ತೆರವು
ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
5ರಂದು ನಡೆಯುವ ಬೆಂಗಳೂರು ನಗರ ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಿ ದಿನಾಂಕ, ಕಾಲ ಮಿತಿ ನಿಗದಿಗೊಳಿಸಲಾಗುವುದು. ಕೆರೆ, ರಾಜಕಾಲುವೆ ಒತ್ತುವರಿ ಬಗ್ಗೆ ಬಿಬಿಎಂಪಿ ಹಾಗೂ ನಗರ ಜಿಲ್ಲಾಧಿಕಾರಿಗಳು ಸರ್ವೆ ನಡೆಸಿ ತೆರವಿಗೆ ಸೂಚನೆ ನೀಡಿದ್ದಾರೆ. 24 ಹಳ್ಳಿಯಲ್ಲಿ ಇನ್ನೂ ಸರ್ವೆ ಆಗಬೇಕಿದೆ. 650 ಕಿಮೀ ವ್ಯಾಪ್ತಿಯಲ್ಲಿ ರಾಜಕಾಲುವೆ ಸರ್ವೆ ನಡೆಸಲಾಗಿದ್ದು, 250 ಕಿಮೀ ಒತ್ತುವರಿಯಾಗಿದೆ. ನ್ಯಾಯಾಲಯದ ಆದೇಶ ಇರುವುದರಿಂದ ತೆರವು ಮಾಡುವುದು ಅನಿವಾರ್ಯ ಎಂದು ಹೇಳಿದರು. ಆದರೆ ಬಿಎಂಟಿಎಫ್ ಪತ್ತೆ ಹಚ್ಚಿರುವ ಬಗರ್ ಹುಕುಂ ಭೂ ಒತ್ತುವರಿ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಸಂಬಂಧಪಟ್ಟ ಶಾಸಕರೇ ಈ ಸಮಿತಿ ಅಧ್ಯಕ್ಷರಾಗಿರುತ್ತಾರೆ ಎಂದರು.