ಬೆಂಗಳೂರು: ಬಡವರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ 'ತಪಾಸನ' ಡಯಾಗ್ನಸ್ಟಿಕ್ ಕೇಂದ್ರ ಆರಂಭಿಸಲಾಗಿದೆ ಎಂದು ಮಾಜಿ ಸಚಿವ ಎಸ್. ಸುರೇಶ್ಕುಮಾರ್ ತಿಳಿಸಿದರು.
ಶನಿವಾರ ರಾಜಾಜಿನಗರದಲ್ಲಿ ಡಾ. ನಾಗರಾಜ ಮೆಮೋರಿಯಲ್ ಹೆರಿಗೆ ಆಸ್ಪತ್ರೆ ಆವರಣದಲ್ಲಿ ತಪಾಸಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ರು. 75 ಲಕ್ಷ ಮೂಲಸೌಕರ್ಯಕ್ಕೆ ನೀಡಲಾಗಿದೆ. ಬಸವೇಶ್ವರ ನಗರದ ರೋಟರಿ ಸಂಸ್ಥೆ ಉಪಕರಣಗಳ ಖರೀದಿಗೆ ರು. 70 ಲಕ್ಷ ನೀಡಿದೆ. ರೋಟರಿ ಕ್ಲಬ್ ಮತ್ತು ಬಿಬಿಎಪಿ ನಡುವೆ ಕೇಂದ್ರದ ನಿರ್ವಹಣೆ ಕುರಿತು ಒಪ್ಪಂದವಾಗಿದೆ ಎಂದು ತಿಳಿಸಿದರು.
ನಗರದ ಡಯಾಗ್ನಸ್ಟಿಕ್ ಸೆಂಟರ್ನಲ್ಲಿ ಬಡವರಿಗೆ ಎಟಕುವ ದರದಲ್ಲಿ ಸೇವೆ ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬದ ಅಂಗವಾಗಿ ಡಯಾಗ್ನಸ್ಟಿಕ್ ಕೇಂದ್ರದ ಪ್ರಾರಂಭಕ್ಕೆ ಸಹಯೋಗ ನೀಡಿದೆ. ಇಲ್ಲಿ ರೋಗಿಗಳ ತಪಾಸಣೆಗೆ ಶೇ.35 -45 ರವರೆಗೆ ರಿಯಾಯಿತಿ ಲಭ್ಯವಾಗುತ್ತದೆ ಎಂದರು.
ಇನ್ಸ್ಟಿಟ್ಯೂಟ್ ಆಫ್ ಡಯಬಿಟಾಲಜಿ: ಸೆ.25ಕ್ಕೆ ಇನ್ಸ್ಟಿಟ್ಯೂಟ್ ಆಫ್ ಡಯಬಿಟಾಲಜಿಯನ್ನು ರಾಜಾಜಿನಗರದಲ್ಲಿ ಆರಂಭಿಸಲಾಗುವುದು. ಪ್ರಾರಂಭಗೊಳ್ಳುವ ಡಯಬಿಟಾಲಜಿ ಕೇಂದ್ರದಲ್ಲಿ ಮಧುಮೇಹದಿಂದ ಉಂಟಾಗುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯಲಿದೆ ಎಂದರು.
ಕಳೆದ ವರ್ಷ ಶಾಸಕರ ನಿಧಿಯಲ್ಲಿ ಪಂಡಿತ್ ದೀನ್ದಯಾಳ್ ಡಯಾಗ್ನಸ್ಟಿಕ್ ಕೇಂದ್ರದಲ್ಲಿ ರು. 2 ಕೋಟಿ 40 ಲಕ್ಷ ವೆಚ್ಚದಲ್ಲಿ 10 ಡಯಾಲಿಸಿಸ್ ಯಂತ್ರ ನೀಡಲಾಗಿತ್ತು. ಇಲ್ಲಿ ಬಿಪಿಲ್ ಕಾರ್ಡ್ದಾರರಿಗೆ ಉಚಿತ ಸೇವೆ ಲಭ್ಯ. ಉಳಿದವರಿಗೆ 500 ವೆಚ್ಚದಲ್ಲಿ ಸೇವೆ ನೀಡಲಾಗುತ್ತಿದೆ ಎಂದರು. ರೋಟೋರಿಯನ್ ನವಿಲೆ, ಪಾಲಿಕೆ ಸದಸ್ಯರಾದ ಕೃಷ್ಣಪ್ಪ ಇದ್ದರು.