ಉಪಗ್ರಹ ಉಡಾವಣೆ ತರಬೇತಿ

Updated on: 

ಬೆಂಗಳೂರು: ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಯಾಟ್‌ಲೈಟ್ ತರಬೇತಿ ಕಾರ್ಯಾಗಾರವನ್ನು ಆ. 7 ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎಚ್.ಸಿ. ನಾಗರಾಜ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತರಬೇತಿಯಲ್ಲಿ ವಿಜ್ಞಾನಿ ಪ್ರೊ. ಯು.ಆರ್. ರಾವ್ ಅತಿಥಿಗಳಾಗಿ ಭಾಗವಹಿಸಲಿದ್ದು, ಇಸ್ರೊ ನಿರ್ದೇಶಕ ಡಾ. ಎಸ್.ಕೆ. ಶಿವಕುಮಾರ್ ಸೇರಿದಂತೆ ಅನೇಕ ವಿಜ್ಞಾನಿಗಳು ಭಾಗವಹಿಸುವರು ಎಂದರು.

ಕನ್ನಡ ಸಾಂಸ್ಕೃತಿಕ ಲೋಕಕ್ಕೆ 'ರಾಗಮಾಧುರಿ' ಪದಾರ್ಪಣೆ
ಬೆಂಗಳೂರು: 'ರಾಗಮಾಧುರಿ' ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಆಗಸ್ಟ್ 12ರಂದು ಪಾದಾರ್ಪಣೆ ಮಾಡುತ್ತಿದೆ. ರಾಗ ಮಾಧುರಿ ಸಂಸ್ಥೆ ತನ್ನ ಸಂಗೀತ ಕಾರ್ಯಕ್ರಮಗಳ ಮೂಲಕ ಕನ್ನಡ ಚಿತ್ರ ಸಂಗೀತ, ಸುಗಮಸಂಗೀತ ಮತ್ತು ರಂಗಸಂಗೀತದ ವೈವಿಧ್ಯತೆಗಳನ್ನು ಪಸರಿಸುವ ಉದ್ದೇಶ ಹೊಂದಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಚಲನಚಿತ್ರ ನಿರ್ದೇಶಕ ಎಸ್. ಕೆ. ಭಗವಾನ್, ನಟ ಸುದರ್ಶನ್, ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ, ಸಾಹಿತಿ ಎಂ.ಎನ್. ವ್ಯಾಸರಾವ್, ಲಹರಿ ಸಂಸ್ಥಯ ತುಳಸೀರಾಮ ನಾಯ್ಡು ಸಮಾರಂಭಕ್ಕೆ ಆಗಮಿಸಲಿದ್ದಾರೆ.
ಮಹಾಸತಿ ಅನಸೂಯ, ನವಜೀವನ, ರಾಣಿ ಹೊನ್ನಮ್ಮ, ನಂದಾದೀಪ, ಚಂದ್ರಕುಮಾರ, ವಿಜಯನಗರದ ವೀರಪುತ್ರ, ಗಾಳಿಗೋಪುರ, ಚಂದವಳ್ಳಿಯ ತೋಟ, ಕ್ರಾಂತಿವೀರ, ದೂರದಬೆಟ್ಟ, ಎರಡು ಕನಸು ಮೊದಲಾದ ಚಿತ್ರಗಳಿಂದ ಆಯ್ದ ಜನಪ್ರಿಯ ಗೀತೆಗಳನ್ನು ಗಾಯಕ ಗಾಯಕಿಯರಾದ ಬದರಿಪ್ರಸಾದ್, ಚಂದ್ರಿಕಾ ಗುರುರಾಜ, ಕೆ.ಎಸ್. ಸುರೇಖಾ, ಆರ್. ಶ್ರೀನಾಥ್  ಪ್ರಸ್ತುತಪಡಿಸಲಿದ್ದಾರೆ.

ಜಿಲ್ಲಾ ಕೇಂದ್ರಕ್ಕಾಗಿ ಧರಣಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ, ಜಿಲ್ಲಾ ಕೇಂದ್ರ ಹೋರಾಟ ಸಮಿತಿ  ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ  ಧರಣಿ ನಡೆಸಿತು.

ಹತ್ತನೇ ಆವಿಷ್ಕಾರ ಸಮಾವೇಶ
ಬೆಂಗಳೂರು: ಭಾರತೀಯ ಕೈಗಾರಿಕಾ ಒಕ್ಕೂಟ ಆಯೋಜಿಸಿರುವ 10ನೇ ಆವಿಷ್ಕಾರ ಸಮಾವೇಶ ಆ.8 ರಿಂದ 9ರವರೆಗೆ ಐಟಿಸಿ ಗಾರ್ಡೇನಿಯಾದಲ್ಲಿ ನಡೆಯಲಿದೆ.
'ಒಟ್ಟು ಪ್ರಗತಿಗಾಗಿ ಆವಿಷ್ಕಾರ' ಎಂಬ ವಿಷಯದ ಬಗ್ಗೆ ನಡೆಯಲಿರುವ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಈ ಬಗ್ಗೆ ಮಾಹಿತಿ ನೀಡಿದರು.

ಉತ್ತಮ ಶಿಕ್ಷಣಕ್ಕೆ ಸರ್ಕಾರದ ಜತೆ ಸಂಸ್ಥೆಗಳು ಕೈಜೋಡಿಸಲಿ
ಕೃಷ್ಣರಾಜಪುರ:  ಬಡಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಸಲುವಾಗಿ ಸರ್ಕಾರದೊಂದಿಗೆ ಸಂಘಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಮಾಜ ಸೇವಕ ಡಾ. ಎನ್.ವೀರಸ್ವಾಮಿರೆಡ್ಡಿ ಅಭಿಪ್ರಾಯಪಟ್ಟರು. ಮಹದೇವಪುರ ಕ್ಷೇತ್ರದ ಕಾಡುಗುಡಿಯಲ್ಲಿ ಜನಪರ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಅಕ್ಷರ ದಾಸೋಹ, ಕ್ಷೀರ ಯೋಜನೆ, ಬಿಸಿಯೂಟ ಯೋಜನೆ, ಸೈಕಲಲ್ವಿತರಣೆ  ಸೇರಿದಂತೆ ಹಲವಾರು  ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ  ಅವುಗಳು  ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿಫಲ ಹೊಂದುತ್ತಿವೆ.  ಹೀಗಾಗಿ ಸಂಘಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಸಾಧ್ಯವಾಗಲಿದೆ ಎಂದರಲ್ಲದೆ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.  ಜನಪರ ರಕ್ಷಣಾ ವೇದಿಕೆಯ ಬೆಂಗಳೂರು ಪೂರ್ವ ತಾಲೂಕು ಅಧ್ಯಕ್ಷ ಮಣಿ.ಪಿ. ಮಾತನಾಡಿದರು. ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೌರಮ್ಮ,  ಪ್ರಶಾಂತ್ ಫೌಂಡೇಷನ್‌ನ  ಸಂಸ್ಥಾಪಕ ಕೆ.ವಿ.ಪ್ರಶಾಂತ್ ವೀರಸ್ವಾಮಿ ರೆಡ್ಡಿ, ಜೆ.ವಿ.ಕೃಷ್ಣಮೂರ್ತಿ, ಎಸ್.ಶೇಖರ್ ಇದ್ದರು.

ಮೊರಾರ್ಜಿ ದೇಸಾಯಿ ಶಾಲೆಗೆ ತಾಪಂ ಅಧ್ಯಕ್ಷೆ ದಿಢೀರ್ ಭೇಟಿ
ಸೂಲಿಬೆಲೆ: ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತಾಪಂ ಅಧ್ಯಕ್ಷೆ ಮಂಜುಳಾ ಡಿ.ಟಿ ವೆಂಕಟೇಶ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚನ್ನಬೈರೇಗೌಡ ನಗರದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗೆ ಭೇಟಿಕೊಟ್ಟ ಅಧ್ಯಕ್ಷೆ, ವಸತಿ ನಿಲಯದ ವಿದ್ಯಾರ್ಥಿಗಳಿಗೆ  ತಯಾರಿಸುವ ಆಹಾರದ ಅಡಿಗೆ ಕೋಣೆ, ಆಹಾರ ತಯಾರಿಕೆಯ ವೇಳೆ ಅನುಸರಿಸುವ ಸ್ವಚ್ಛತೆ, ಪಾತ್ರೆ ತೊಳೆಯುವ ಸ್ಥಳವನ್ನು ಪರಿಶೀಲನೆ ಮಾಡಿದರು. ಪಾತ್ರೆ ತೊಳೆವ ಸ್ಥಳದಲ್ಲಿ ವಾಸನೆ ಬರುತ್ತಿದ್ದ ಸ್ಥಳವನ್ನು ಶುಭ್ರವಾಗಿಟ್ಟುಕೊಳ್ಳುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು. ನಂತರ ನಿಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ನಿಲಯದಲ್ಲಿ ಗುಣಮಟ್ಟದ ಆಹಾರ, ಉತ್ತಮ ಕುಡಿಯುವ ನೀರು, ಹಾಲು ಮೊಟ್ಟೆ ನೀಡುತ್ತಿರುವ ಬಗ್ಗೆ ಪ್ರಶ್ನೆಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಬಾಲಕ ಮತ್ತು ಬಾಲಕಿಯರ ತಂಗುವ ಕಟ್ಟಡಗಳಲ್ಲಿ ವಿದ್ಯುತ್ ಕೈಕೊಟ್ಟಾಗ ಸಮಸ್ಯೆಯಾಗುತ್ತಿದೆ. ಸೋಲಾರ್ ದೀಪಗಳ ಅವಶ್ಯಕತೆಯಿದೆ ಎಂದು ವಿದ್ಯಾರ್ಥಿಗಳ ದೂರಿನ ಮೇರೆಗೆ ಇನ್ನೂ ಕೆಲವೇ ದಿನಗಳಲ್ಲಿ ಎರಡು ಕಟ್ಟಡಗಳಿಗೆ ಅಗತ್ಯವಾಗಿರುವ ಸೋಲಾರ್ ದೀಪಗಳ ವ್ಯವಸ್ಥೆ ಮಾಡುವ ಭರವಸೆಯನ್ನು ತಾಪಂ ಅಧ್ಯಕ್ಷೆ ನೀಡಿದರು. ಸೋಲಾರ್ ಸಮಸ್ಯೆಯಿಂದ ಬಿಸಿ ನೀರು ದೊರೆಯುತ್ತಿಲ್ಲ ಹಾಗೂ ನೀರು ಪೂರೈಕೆ ಮಾಡುತ್ತಿರುವ ಸಂಪು ಸ್ವಚ್ಚ ಮಾಡದ ಬಗ್ಗೆ ತಾಪಂ ಅಧ್ಯಕ್ಷೆ ನಿಲಯ ಪಾಲಕರ ವಿರುದ್ಧ  ಗರಂ ಆದರು.ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳಿಗೆ ಕಲಿಕೆಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಬಳಿಸಿಕೊಂಡು ಪ್ರಗತಿಯನ್ನು ಕಾಣಬೇಕು. ನಿಲಯದಲ್ಲಿ ಸಮಸ್ಯೆಗಳೇನಾದರೂ ಕಂಡು ಬಂದರೆ ತಿಳಿಸಿ ಎಂದಾಗ ಶಾಲೆಯ ಸುತ್ತಲು ಕಾಂಪೌಂಡ್ ಇಲ್ಲದೇ ಭದ್ರತೆಯ ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸಿ ಎಂದರು. ಈ ಬಗ್ಗೆ ಸರ್ಕಾರಕ್ಕೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಿ. ಬಂದ ತಕ್ಷಣ ಕಾರ್ಯ ಪ್ರಾರಂಭಿಸುವ ಭರವಸೆಯನ್ನು ನಿಲಯಪಾಲಕರು ಅಧ್ಯಕ್ಷೆಗೆ ತಿಳಿಸಿದರು. ತಾವು ಕೂಡ ಈ ಬಗ್ಗೆ ಡಿಸಿಗೆ ಪತ್ರ ಬರೆಯವುದಾಗಿ ತಿಳಿಸಿದರು.

ಘಟಿಕೋತ್ಸವದಲ್ಲಿ 64 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ
ರಾಮನಗರ: ಗ್ರಾಮೀಣ ಬಡ ಕುಟುಂಬಗಳ ಪ್ರತಿಭೆಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಬಿಡದಿಯಲ್ಲಿ ಪ್ರಾರಂಭಿಸಿರುವ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ(ಟಿಟಿಟಿಐ) 8 ವರ್ಷ ಪೂರೈಸಿದೆ. ಕೋರ್ಸ್ ಪೂರ್ಣಗೊಳಿಸಿದ 5ನೇ ತಂಡಕ್ಕೆ ಸೋಮವಾರ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಮೂರು ವರ್ಷದ ಕೋರ್ಸ್ ಪೂರ್ಣಗೊಳಿಸಿದ 64 ವಿದ್ಯಾರ್ಥಿಗಳಿಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ಲಾಂಟ್ ಆವರಣದಲ್ಲಿ ನಡೆದ ಘಟಿಕೋತ್ಸವದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನವೋಮಿ ಇಷಿ ಅವರು ಪ್ರಮಾಣ ಪತ್ರ ಪ್ರದಾನ ಮಾಡಿ, ಅಭಿನಂದಿಸಿದರು. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿಯು ಸಾಮಾಜಿಕ ಉಪ ಕ್ರಮಗಳ ಅಂಗವಾಗಿ 2007ರಲ್ಲಿ ಟಿಟಿಟಿಐ ಪ್ರಾರಂಭಿಸಿದ್ದು, 2010ರಲ್ಲಿ ಕೋರ್ಸ್ ಪೂರ್ಣಗೊಳಿಸಿದ ಮೊದಲ ತಂಡಕ್ಕೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಮಾಣ ಪತ್ರ ಪ್ರದಾನ ಮಾಡಿದ್ದರು.
ಉದ್ಯೋಗವೂ ಖಾತ್ರಿ: ತರಬೇತಿ ಸಂಸ್ಥೆಯಲ್ಲಿ ವಾಹನ ಉತ್ಪಾದನೆ ಕುರಿತ ಜ್ಞಾನ ನೀಡುವ ಜತೆಗೆ ಮೂಲ ವಿಷಯಗಳೊಂದಿಗೆ ಸಂಪೂರ್ಣ ಕಲಿಕಾ ಅನುಭವ, ಮನರಂಜನಾ ಚಟುವಟಿಕೆಗಳನ್ನು ಸೇರಿಸಿ ತರಬೇತಿಯ ಪಠ್ಯಕ್ರಮಗಳನ್ನು ವಿನ್ಯಾಸಗೊಳಿಸಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯಗಳನ್ನು ಹೊಂದಲು ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com