ಬೆಂಗಳೂರು: ಎರಡು ಸಾವಿರ ರು.ವಿಚಾರವಾಗಿ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಣ್ಣೂರು ಮುಖ್ಯರಸ್ತೆ ಕಾಚರಕನಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಾಚರಕನಹಳ್ಳಿ ನಿವಾಸಿ ಕೇಶವಮೂರ್ತಿ (27) ಕೊಲೆಯಾದವ. ಈತನ ಸ್ನೇಹಿತ ಸೋಮಶೇಖರ್ ರೆಡ್ಡಿ ಎಂಬಾತನೇ ಕೃತ್ಯ ಎಸಗಿದ್ದು ಪೊಲೀಸರು ಬಂಧಿಸಿದ್ದಾರೆ. ಅವಿವಾಹಿತನಾಗಿದ್ದ ಕೇಶವ ಮನೆ ಬಾಡಿಗೆ ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದ. ವಿವಾಹಿತನಾಗಿರುವ ಸೋಮಶೇಖರ್ ರೆಡ್ಡಿ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಕಾಚರಕನಹಳ್ಳಿಯಲ್ಲಿ ವಾಸವಿದ್ದ. ಇಬ್ಬರು ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದರು. ಕೇಶವ ಕೆಲ ತಿಂಗಳ ಹಿಂದೆ ಸೋಮಶೇಖರ್ ಬಳಿ ಸಾಲ ಪಡೆದಿದ್ದ ಎನ್ನಲಾಗಿದೆ. ಅದರಲ್ಲಿ ಬಹುತೇಕ ಹಣ ಪಾವತಿ ಮಾಡಿದ್ದು ಇನ್ನು 2 ಸಾವಿರ ನೀಡುವುದು ಬಾಕಿ ಇತ್ತು. ಹೀಗಾಗಿ ಸೋಮಶೇಖರ್, ಕೇಶವನಿಗೆ ಆಗಾಗ ಹಣ ಕೇಳುತ್ತಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಉಂಟಾಗುತ್ತಿತ್ತು.
ಭಾನುವಾರ ರಾತ್ರಿ ಸೋಮಶೇಖರ್, ಕೇಶವ ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಬಾರ್ವೊಂದಕ್ಕೆ ಮದ್ಯಪಾನ ಮಾಡಲು ಹೋಗಿದ್ದರು. ಆಗ ಇವರಿಬ್ಬರ ನಡುವೆ 2 ಸಾವಿರ ವಿಚಾರವಾಗಿ ಜಗಳ ಆರಂಭವಾಗಿದೆ. ಅಲ್ಲಿಂದ ಹೊರ ಬಂದ ಇಬ್ಬರು ರಾತ್ರಿ 11.30ರ ಸುಮಾರಿಗೆ ಹೆಣ್ಣೂರು ಮುಖ್ಯರಸ್ತೆ ಸೆಂಟ್ ಥಾಮಸ್ ಟೌನ್ನಲ್ಲಿರುವ ಜ್ಯೋತಿ ಪ್ರೌಢ ಶಾಲೆ ಮುಂದೆ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಸೋಮಶೇಖರ್, ಚಾಕುವಿನಿಂದ ಕೇಶವ ಹೊಟ್ಟೆ, ಎದೆ ಹಾಗೂ ಇತರ ಭಾಗಗಳಿಗೆ ತಿವಿದಿದ್ದಾನೆ. ಈ ವೇಳೆ ಪ್ರತಿದಾಳಿ ನಡೆಸಿದಾಗ ಸೋಮಶೇಖರ್ ಕೈಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೇಶವ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ಸೋಮಶೇಖರ್ ರೆಡ್ಡಿಯನ್ನು ಬಂಧಿಸಿದ್ದಾರೆ.
ಹುಟ್ಟುಹಬ್ಬವಿತ್ತು
ಕೊಲೆಯಾದ ಕೇಶವನಿಗೆ ಸೋಮವಾರ ಹುಟ್ಟುಹಬ್ಬವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆ ಮುಂಭಾಗ ಕಿತ್ತಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದ ಹೊಯ್ಸಳ ಪೊಲೀಸರು ಇಬ್ಬರನ್ನು ಪ್ರಶ್ನಿಸಿದ್ದರು. ಆದರೆ, ತಾವು ತಮಾಷೆಗೆ ಜಗಳವಾಡುತ್ತಿರುವುದಾಗಿ ಹೇಳಿ ಕಳುಹಿಸಿದ್ದಾರೆ. ಹೊಯ್ಸಳ ಹೊರಟ ಬಳಿಕ ಮತ್ತೆ ಇಬ್ಬರು ಕಿತ್ತಾಡುಕೊಂಡಿದ್ದಾರೆಎಂದು ಪೊಲೀಸರು ತಿಳಿಸಿದರು.