ಡ್ಯಾನ್ಸ್ ಬಾರ್: ಇಕ್ಕಟ್ಟಿನಲ್ಲಿ ಪೊಲೀಸರು

Updated on: 

ಬೆಂಗಳೂರು: ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಯುವತಿಯರ ನೃತ್ಯ ನಿಷೇಧ ನಿಯಮವನ್ನು ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನೀಡಿರುವ ಆದೇಶ ನಗರ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದ್ದ ಪೊಲೀಸರು ಮತ್ತೊಮ್ಮೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಚಾಲ್ತಿಯಲ್ಲಿರುವ ನಿಯಮವನ್ನೇ ಮುಂದುವರೆಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಮನೋರಂಜನೆಯ ವಸ್ತುವಾಗಿ ಬಳಸುವುದಕ್ಕೆ ನಿಷೇಧಿಸಿ 2013ರ ಸೆಪ್ಟಂಬರ್‌ನಲ್ಲಿ ಸರ್ಕಾರದ ಹೊರಡಿಸಿದ ಆದೇಶವನ್ನು ಪೊಲೀಸರು ಪಾಲಿಸುತ್ತಿದ್ದಾರೆ. ಅಂದರೆ ಬಾರ್‌ಗಳಲ್ಲಿ ಮಹಿಳೆಯರನ್ನು ನೃತ್ಯ ಅಥವಾ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಾರದು ಎಂದು ಅರ್ಥ ಕೊಡುತ್ತದೆ. ಹಾಗೆಂದು, ಯಾರೂ ನೃತ್ಯ ಮಾಡಬಾರದು ಅಂತಲ್ಲ. ಬದಲಿಗೆ ಪಬ್ ಹಾಗೂ ಡಿಸ್ಕೋಥೆಕ್‌ಗಳಿಗೆ ಬರುವ ಗ್ರಾಹಕರು ನೃತ್ಯ ಮಾಡಬಹುದು ಎನ್ನುತ್ತಾರೆ ಪೊಲೀಸರು.
ರಕ್ಷಣಾತ್ಮಕ ನಿರ್ಧಾರ: ಉತ್ತರ ಹಾಗೂ ಕೇಂದ್ರ ಪೊಲೀಸ್ ವಿಭಾಗದಲ್ಲಿ ಒಟ್ಟು 35 ಬಾರ್‌ಗಳು ಅನುಮತಿ ಪಡೆದು ಮಹಿಳೆ ಪರಿಚಾರಕಿಯರನ್ನು ನೇಮಿಸಿಕೊಂಡಿವೆ. ಅನೈತಿಕ ಚಟುವಟಿಕೆ ಹಿನ್ನೆಲೆಯಲ್ಲಿ ಮೂರು ಬಾರ್‌ಗಳ ಮೇಲೆ ಪೊಲೀಸರು ಈಗಾಗಲೇ ದಾಳಿ ನಡೆಸಿದ್ದಾರೆ. ಲೈವ್ ಬ್ಯಾಂಡ್‌ಗಳ ಮೇಲೆ ಪೊಲೀಸರ ದಾಳಿ ಬಳಿಕ ಬಾರ್ ಮಾಲೀಕರು ಹೈಕೋರ್ಟ್ ಮೊರೆ ಹೋಗಿ ಅನುಮತಿ ಪಡೆದುಕೊಳ್ಳಲು ಮುಂದಾಗುವ ಮೂಲಕ ರಕ್ಷಣಾತ್ಮಕ ನಿರ್ಧಾರದ ಮೊರೆ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ನಿರಾಕರಿಸಿದ್ದಾರೆ. ಆದೇಶ ಕೈ ಸೇರದ ಕಾರಣ ಈ ಬಗ್ಗೆ ಪ್ರತಿಕ್ರೀಯಿಸುವುದು ಸರಿಯಲ್ಲ ಎಂದಿದ್ದಾರೆ.
ಹೈಕೋರ್ಟ್ ಆದೇಶವನ್ನು ಸ್ವಾಗತಿಸಿರುವ ರಾಷ್ಟ್ರೀಯ ರೆಸ್ಟೋರೆಂಟ್ ಸಂಘಟನೆ ಬೆಂಗಳೂರು ಘಟಕದ ಸದಸ್ಯ ಅಶೀಶ್ ಕೊಠಾರಿ, ಕೆಲವು ಕಠಿಣ ಕಾನೂನುಗಳು ಈಗಿನ ಕಾಲಕ್ಕೆ ತಕ್ಕಂತೆ ಬದಲಾಗುವ ಅಗತ್ಯವಿದೆ. ಆದರೂ, ನಗರ ಪೊಲೀಸರೇ ಬಾರ್‌ಗಳಿಗೆ ಅಂತಿಮವಾಗಿ ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ ಎಂದರು.
ವಕೀಲರ ಪ್ರತಿಕ್ರಿಯೆ: ಹೈಕೋರ್ಟ್ ಆದೇಶದೊಂದಿಗೆ ನಗರದಲ್ಲಿರುವ ಅನುಮತಿ ಹೊಂದಿದ ಡ್ಯಾನ್ಸ್ ಬಾರ್‌ಗಳು ವೃತ್ತಿಪರ ನೃತ್ಯಗಾರ್ತಿಯರನ್ನು ಮನೋರಂಜನೆ ಉದ್ದೇಶಕ್ಕೆ ನೇಮಿಸಿಕೊಳ್ಳಬಹುದು. ಅಪರಾಧ ಪ್ರಕರಣಗಳು ಹೆಚ್ಚುತ್ತವೆ ಎಂದು ಪೊಲೀಸರು ಡ್ಯಾನ್ಸ್ ಬಾರ್‌ಗಳನ್ನು ನಿಷೇಧಿಸಲು ಬರುವುದಿಲ್ಲ ಎಂದು ಡ್ಯಾನ್ಸ್ ಬಾರ್ ಸಂಘಟನೆ ಪ್ರತಿನಿಧಿಸಿದ ವಕೀಲ ಎಂ. ಕೃಷ್ಣಪ್ಪ ಹೇಳಿದರು.
ಹೈಕೋರ್ಟ್ ಆದೇಶದ ಪ್ರಕಾರ ಅನುಮತಿ ಪಡೆದ ಬಾರ್‌ಗಳು, ತಮ್ಮ ಬಾರ್ ಆವರಣದಲ್ಲಿ ನೃತ್ಯಗಾರ್ತಿಯರನ್ನು ನೇಮಿಸಿಕೊಳ್ಳಲು ಅನುಮತಿ ಕೋರಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಬಹುದು. ಬಳಿಕ ಆಯುಕ್ತರು ನಿಯಮಾನುಸಾರ ಅನುಮತಿ ನೀಡುವುದು ಅನಿವಾರ್ಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com