ಬೆಳಗಾವಿ: ಸುಮಾರು ರು. 36 ಲಕ್ಷ ಮೌಲ್ಯದ 1.2 ಕೆ.ಜಿ. ಕೊಕೇನ್ ಮಾದಕ ವಸ್ತುವನ್ನು ವಶದಲ್ಲಿಟ್ಟುಕೊಂಡಿದ್ದ ವ್ಯಕ್ತಿಯನ್ನು ಖಾನಾಪುರ ಪೊಲೀಸ್ರು ಶನಿವಾರ ಬಂಧಿಸಿದ್ದಾರೆ. ಖಾನಾಪುರ ತಾಲೂಕಿನ ಬೂರಣಕಿ ಕ್ರಾಸ್ ಬಳಿ, ಅದೇ ತಾಲೂಕಿನ ರಾಮಾಪುರ ಗ್ರಾಮದ ಮೈನುದ್ದೀನ್ ಇಮಾಮಸಾಬ್ ಪಟೇಲ್ ಎಂಬಾಂತ ಅಕ್ರಮವಾಗಿ ಕೊಕೇನ್ ಸಂಗ್ರಹಿಸಿಟ್ಟಿದ್ದ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಹೇಳಿದ್ದಾರೆ.
ಮರಕ್ಕೆ ಕಾರು ಡಿಕ್ಕಿ: ಇಬ್ಬರ ಸಾವು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಹೊಸೂರು- ಸೋಂಪುರ ರಾಷ್ಟ್ರೀಯ ಹೆದ್ದಾರಿಯ ಕೆಸ್ತೂರು ಗೇಟ್ ಬಳಿ ಶನಿವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗಜೇಂದ್ರಾಚಾರಿ(40) ಮತ್ತು ತುಮಕೂರು ಜಿಲ್ಲೆ ಸಿರಾ ತಾಲೂಕಿನ ರಾಜಲಿಂಗಾಚಾರಿ(35) ಮೃತರು. ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಊರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಶೃಂಗೇರಿ ಶಿವಗಂಗಾ ಮಠ ಸ್ವಾಮೀಜಿ ಚಾತುರ್ಮಾಸ್ಯ
ಬೆಂಗಳೂರು: ಶೃಂಗೇರಿ ಶಿವಗಂಗಾ ಮಠದ ಶ್ರೀ ಪುರುಷೋತ್ತಮ ಭಾರತಿ ಸ್ವಾಮೀಜಿಯವರ ಚಾತುರ್ಮಾಸ್ಯ ಜು.12ರಿಂದ ಆರಂಭವಾಗಿದೆ. ಶನಿವಾರದಿಂದ ಮುಂದಿನ 2 ತಿಂಗಳವರೆಗೆ ಶ್ರೀಗಳು ಚಾತುರ್ಮಾಸ ವ್ರತಾಚರಣೆ ನಡೆಸುತ್ತಾರೆ. ಜು.13ರಂದು ವಿಶೇಷ ಪೂಜೆ ನಡೆಯಲಿದ್ದು ಭಕ್ತರಿಗೆ ಮಂತ್ರಾಕ್ಷತೆ ನೀಡುತ್ತಾರೆ. ಮುಂದಿನ 2 ತಿಂಗಳ ಕಾಲ ಮಠದಲ್ಲಿ ಪ್ರತಿನಿತ್ಯ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.8ರಂದು ಶಾರದಾ ಪ್ರತಿಷ್ಠಾಪನಾ ವರ್ಧಂತಿ, ಶಾರದಾಂಬಾ ಮಹಾಭಿಷೇಕ ಹಾಗೂ ರಥೋತ್ಸವ ನಡೆಯಲಿದೆ.
ಪಂಚೆತೊಟ್ಟವರೂ ಭ್ರಷ್ಟರೆ! ಹರಿಹರ ಶಾಸಕ ಶಿವಶಂಕರ್
ಕೋಲಾರ: ರಾಜಕಾರಣಿಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟರೆ! ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭ್ರಷ್ಟ ರಾಜಕಾರಣದ ವಿರುದ್ಧ ಮನಬಿಚ್ಚಿ ಮಾತನಾಡಿದ್ದನ್ನು ವಿವಾದವಾಗಿಸಲಾಯಿತು. ಆದರೆ, ಕೆಲವರು ತಮ್ಮ ಅಭಿಪ್ರಾಯಗಳನ್ನು ಪಂಚೆಯಲ್ಲಿ ಅದುಮಿಟ್ಟುಕೊಂಡಿದ್ದಾರೆ! ಹೀಗೆಂದವರು ಹರಿಹರ ಶಾಸಕ ಶಿವಶಂಕರ್. ಈ ಮೂಲಕ ಶಿವಶಂಕರ್ ಹೊಸ ವಿವಾದ ಸೃಷ್ಟಿಸಿದ್ದಾರೆ. ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಆರ್.ಚೌಡರೆಡ್ಡಿ ಅವರ ಅಭಿನಂದನಾ ಸಮಾರಂಭ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಎಂದರು. ಚುನಾವಣೆಗಳು ಇಂದು ವ್ಯವಹಾರವಾಗಿದೆ. ಎಲ್ಲರ ಮನೆಯ ದೋಸೆಯೂ ತೂತು. ಇದನ್ನು ಎಚ್.ಡಿ.ಕುಮಾರಸ್ವಾಮಿ ಬಯಲು ಮಾಡಿದ್ದಾರೆ. ಪಂಚೆ ತೊಟ್ಟವರೂ ಭ್ರಷ್ಟರಾಗಿದ್ದಾರೆ ಎಂದರು.ಆದರೆ, ಪಂಚೆ ತೊಟ್ಟವರು ಯಾರು ಎಂಬುದನ್ನು ಹೇಳುವ ಧೈರ್ಯ ಮಾತ್ರ ತೋರಲಿಲ್ಲ.
ಲಂಡನ್ ಯಕ್ಷಗಾನ ಸ್ಪರ್ಧೆ ಆಡಿಷನ್ 15ರಿಂದ
ಮಂಗಳೂರು: 10 ಲಕ್ಷ ಬಹುಮಾನ ಮೊತ್ತದ ಲಂಡನ್ ಯಕ್ಷಗಾನ ಸ್ಪರ್ಧೆಯ ಆಡಿಷನ್ ಜು. 15ರಿಂದ ಮಂಗಳೂರಿನಲ್ಲಿ ಆರಂಭವಾಗಲಿದೆ.
ಜು.15ರಿಂದ 18ರವರೆಗೆ ಮಂಗಳೂರು ಪುರಭವನದಲ್ಲಿ ತೆಂಕುತಿಟ್ಟು, ಜು.21ರಿಂದ 23ರ ವರೆಗೆ ಉಡುಪಿ ಪಿ.ಪಿ.ಸಿ. ಹಾಲ್ನಲ್ಲಿ ಬಡಗುತಿಟ್ಟು ಆಡಿಷನ್ ನಡೆಯಲಿದೆ. ಪ್ರಥಮ ಸುತ್ತು ಆ. 1ರಿಂದ 7ರ ವರೆಗೆ ಮಂಗಳೂರು ನೆಹರೂ ಮೈದಾನದಲ್ಲಿ ತೆಂಕುತಿಟ್ಟು ಮತ್ತು ಕುಂದಾಪುರ ನೆಹರೂ ಮೈದಾನದಲ್ಲಿ ಆ. 9ರಿಂದ 15ರವರೆಗೆ ಬಡಗುತಿಟ್ಟಿನ ಯಕ್ಷಗಾನ ಏರ್ಪಡಲಿದೆ ಎಂದು ಕುಂಟಿಕಾನಮಠ ಸಂಸ್ಥೆ ನಿರ್ದೇಶಕ ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಭಟ್ ಬಾಯಾರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಹಂತದಲ್ಲಿ ಸೋತ ತಂಡಗಳು ಆ.20 ಮತ್ತು 21ಕ್ಕೆ ಮೈಸೂರಿನಲ್ಲಿ ನಡೆಯುವ 2ನೇ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಇಲ್ಲಿ ವಿಜೇತರಾದವರು ಹಾಗೂ ಮಂಗಳೂರು, ಉಡುಪಿಯಲ್ಲಿ ವಿಜೇತ ತಂಡ ಆ.24ರಿಂದ ಬೆಂಗಳೂರು ಜಯನಗರದ ಶಾಲಿನೀ ಮೈದಾನದಲ್ಲಿ 7 ದಿನ ನಡೆಯಲಿರು ಸೆಮಿಫೈನಲ್ ಹಂತಕ್ಕೆ ತಲುಪಲಿದೆ. 31ರಂದು ಫೈನಲ್ ಸ್ಪರ್ಧೆ ಇರುತ್ತದೆ. ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವ ತಂಡಗಳಿಗೆ ಗೌರವಧನ ನೀಡಲಾಗುವುದು ಎಂದರು.
ವಿವಿ ಕಾಯ್ದೆ ತಿದ್ದುಪಡಿ ಸದನದಲ್ಲಿ ಪ್ರಸ್ತಾಪ: ಐವನ್
ಮಂಗಳೂರು: ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡಿಗೊಳಿಸಿ ಸಿಂಡಿಕೇಟ್ ಮತ್ತು ಸೆನೆಟ್ಗೆ ವಿದ್ಯಾರ್ಥಿ ಪ್ರತಿನಿಧಿ ಆಯ್ಕೆಗೆ ಆವಕಾಶ ಕಲ್ಪಿಸಬೇಕು, ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಐಚ್ಛಿಕ ವಿಷಯ ಕಲಿಕೆಗೆ ಅವಕಾಶ ಕಲ್ಪಿಸುವಂತೆ ಅಧಿವೇಶನದಲ್ಲಿ ಸರ್ಕಾರವನ್ನು ಆಗ್ರಹಿಸುವುದಾಗಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ಎನ್ಎಸ್ಯುಐ ಶನಿವಾರ ನಗರದ ಅಲೋಶಿಸ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ಧ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ವಿವಿ ಸಿಂಡಿಕೇಟ್ ಮತ್ತು ಸೆನೆಟ್ ವಿದ್ಯಾರ್ಥಿ ಪ್ರಾತಿನಿಧ್ಯವನ್ನು 14 ವರ್ಷ ಹಿಂದೆ ವಿವಿ ಕಾಯ್ದೆಗೆ ತಿದ್ದುಪಡಿ ತಂದು ತೆಗೆದುಹಾಕಲಾಗಿತ್ತು ಎಂದು ಹೇಳಿದರು.
ಮುರಳಿ ಮನೋಹರ ಜೋಶಿಗೆ ಧರ್ಮಶ್ರೀ ಪ್ರಶಸ್ತಿ
ಪುತ್ತೂರು: ಈಶ್ವರಮಂಗಲ ಧರ್ಮಶ್ರೀ ಪ್ರತಿಷ್ಠಾನದಿಂದ 'ಧರ್ಮಶ್ರೀ ಪ್ರಶಸ್ತಿ' ಯನ್ನು ಡಾ. ಮುರಳಿ ಮನೋಹರ ಜೋಶಿಯವರಿಗೆ ಶನಿವಾರ ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಶಿ ಅವರಿಗೆ ನೀಡಿ ಗೌರವಿಸಲಾಯಿತು. ಪುತ್ತೂರಿನ ವಿವೇಕಾನಂದ ಕಾಲೇಜ್ನಲ್ಲಿ ನಡೆದ ಕಾಲೇಜ್ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
ಲಂಡನ್ ಪ್ರದರ್ಶನ
ಫೈನಲ್ನಲ್ಲಿ ವಿಜೇತ ತೆಂಕು ಹಾಗೂ ಬಡಗುತಿಟ್ಟಿನ ತಂಡಗಳಿಗೆ ತಲಾ 10 ಲಕ್ಷ, ದ್ವಿತೀಯ ತಲಾ ರು. 5 ಲಕ್ಷ ಹಾಗೂ 7 ವಿಭಾಗಗಳಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು. ಫೈನಲ್ನಲ್ಲಿ ವಿಜೇತ ಎರಡು ತಂಡಗಳು ಅಕ್ಟೋಬರ್ನಲ್ಲಿ ಲಂಡನ್ನಲ್ಲಿ ನಡೆಯುವ ಬಿಸಿನೆಸ್ ಸಮ್ಮೇಳನದಲ್ಲಿ ಪ್ರದರ್ಶನ ನೀಡಲಿವೆ.
ಯಡ್ತೆರೆಯಲ್ಲಿ ವಿದ್ಯಾರ್ಥಿನಿ 'ಹತ್ಯಾ'ಚಾರ?
ಬೈಂದೂರು: ಧರ್ಮಸ್ಥಳದಲ್ಲಿ ನಡೆದ ಸೌಜನ್ಯ 'ಹತ್ಯಾ'ಚಾರ ಪ್ರಕರಣದ ಮಾದರಿಯಲ್ಲೇ ಯಡ್ತೆರೆ ಗ್ರಾಮದ ಬೀರುಮನೆಬೈಲು ಎಂಬಲ್ಲಿ ಪ್ರಕರಣವೊಂದು ನಡೆದಿದೆ. ಬುಧವಾರ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಶನಿವಾರ ಮನೆ ಸಮೀಪದ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇದೊಂದು ಅತ್ಯಾಚಾರ- ಕೊಲೆ ಎಂಬ ಶಂಕೆ ದಟ್ಟವಾಗಿದೆ. ಬೀರುಮನೆಬೈಲು ನಿವಾಸಿ ಶಂಕರ ಕೊಠಾರಿ ಎಂಬವರ ಪುತ್ರಿ ರತ್ನ (17) ಮೃತ ವಿದ್ಯಾರ್ಥಿನಿ. ಶಿರೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ ಈಕೆ ಜು.9ರಂದು ಬೆಳಗ್ಗೆ ಕಾಲೇಜಿಗೆ ಹೋಗಿದ್ದು, ಸಂಜೆ ಮರಳಿ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಆಕೆಯ ತಂದೆ ಬೈಂದೂರು ಠಾಣೆಗೆ ದೂರು ನೀಡಿದ್ದರು.
ರಾಜ್ಯದ ಅಲ್ಲಲ್ಲಿ ಉತ್ತಮ ಮಳೆ
ಬೆಂಗಳೂರು: ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ಉತ್ತಮ ಮಳೆಯಾಗಿದೆ. ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಬಿರುಸುಗೊಂಡಿದ್ದು, ಮಡಿಕೇರಿ, ತಲಕಾವೇರಿ, ಭಾಗಮಂಡಲ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆಯಾಗುತ್ತಿದೆ. ಭಾಗಮಂಡಲದಲ್ಲಿ ಕಾವೇರಿ ನದಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ಇನ್ನೆರಡು ಇದೇ ರೀತಿ ಮಳೆ ಮುಂದುವರಿದರೆ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಲಿದೆ. ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಇಡೀ ದಿನ ಮಳೆ ಸುರಿದಿದೆ. ಖಾನಾಪುರ ಮತ್ತು ಬೆಳಗಾವಿ ತಾಲೂಕುಗಳಲ್ಲಿ ಬೆಳಗಿನ ಜಾವದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.