ವಿವಾಹ ದೃಢೀಕರಣಕ್ಕೆ ನೋಟರಿ

Updated on: 

ಕ.ಪ್ರ. ವಾರ್ತೆ ಬೆಂಗಳೂರು ಜು.14
ವಿವಾಹ ದೃಢೀಕರಣ ಪತ್ರವನ್ನು ನೋಟರಿಯವರು ನೀಡುವಂತಿಲ್ಲ ಎಂದು ಹೇಬಿಯಸ್ ಕಾರ್ಪಸ್ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನ ರಿಜಿಸ್ಟ್ರಾರ್ ಹಾಗೂ ಕಾನೂನು ಕಾರ್ಯದರ್ಶಿ ನೋಟರಿಗಳಿಗೆ ಸುತ್ತೋಲೆ ಹೊರಡಿಸುವಂತೆ ನ್ಯಾ.ಕೆ.ಎಲ್. ಮಂಜುನಾಥ್ ಹಾಗೂ ನ್ಯಾ. ರವಿ ಮಳೀಮಠ್ ಅವರ ಪೀಠ ಸೂಚಿಸಿದೆ.
ಪ್ರಕರಣ ಹಿನ್ನೆಲೆ: ಮನೋಜ್ ಮತ್ತು ಕೃತಿಕಾ ಎಂಬುವರು 2012ರಲ್ಲಿ ಪ್ರೀತಿಸಿ ಸಿವಿಲ್ ಕೋರ್ಟ್ ಆವರಣದಲ್ಲಿ ವಿವಾಹವಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ನೋಟರಿಯವರು ವಿವಾಹದ ದೃಢೀಕರಣ ಪತ್ರ ನೀಡಿದ್ದರು. ಕೆಲವು ದಿನಗಳ ನಂತರ ಕೃತಿಕಾ ತವರು ಮನೆಗೆ ಹೋಗುವುದಾಗಿ ಹೇಳಿ ಚೆನ್ನೈಗೆ ತೆರಳಿದರು.
  ಅವರು ವಾಪಸ್ ಆಗದ ಹಿನ್ನೆಲೆಯಲ್ಲಿ ಕೃತಿಕಾರನ್ನು  ಪತ್ತೆಹಚ್ಚುವಂತೆ ಮನೋಜ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು.  ಈ ಮಧ್ಯೆ ಕೃತಿಕಾ ಪತ್ರ ಬರೆದು, ಮನೋಜ್ ತನಗೆ ಹೆಚ್ಚು ಕಿರುಕುಳ ನೀಡುತ್ತಿದ್ದು ತಾನು ವಾಪಸ್ ಆಗುವುದಿಲ್ಲ ಎಂದು ಉಲ್ಲೇಖಿಸಿದರು.  
ವಿಚಾರಣೆ ವೇಳೆ ಆಕೆ ತಾನು ಯಾರನ್ನು ವಿವಾಹವಾಗಿಲ್ಲ ಎಂದು ಹೇಳಿಕೆ ನೀಡಿದರು.  ವಿವಾಹ ಆಗಿರುವುದಾಗಿ ನೋಟರಿ ನೀಡಿದ್ದ ವಿವಾಹ ದೃಢೀಕರಣ ಪತ್ರವನ್ನು  ಮನೋಜ್ ಪೀಠಕ್ಕೆ ಸಲ್ಲಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ವಿವಾಹ ಪ್ರಮಾಣ ಪತ್ರನೋಂದಾಣಿಧಿಕಾರಿಗಳು ನೀಡಿದರೆ ಮಾತ್ರ ಮಾನ್ಯ ಮಾಡಲಾಗುತ್ತದೆ. ಆದರೆ ನೋಟರಿಯವರು ನೀಡಿರುವ ದೃಢೀಕರಣ ಪತ್ರ ಪರಿಗಣಿಸಲು ಅಸಾಧ್ಯ ಮತ್ತು ಅವರ ವಿವಾಹ ಕಾನೂನಾತ್ಮಕವಾಗಿ ನೆರೆವೇರದ ಹಿನ್ನೆಲೆಯಲ್ಲಿ ವಿವಾಹಿತರೆಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶಿಸಿ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿತು.

ಅಮಾನತ್ ಬ್ಯಾಂಕ್ ವಿಲೀನ ಮರುಮೌಲ್ಯಮಾಪನಕ್ಕೆ ಸೂಚನೆ
ಬೆಂಗಳೂರು: ಕೆನರಾ ಬ್ಯಾಂಕ್‌ನೊಂದಿಗೆ ಅಮಾನತ್ ಬ್ಯಾಂಕ್ ವಿಲೀನಗೊಳಿಸುವ ಸಂಬಂಧ ಬ್ಯಾಂಕ್‌ನ ಆಸ್ತಿ ಮರುಮೌಲ್ಯಮಾಪನ ಮಾಡುವಂತೆ ಹೈಕೋರ್ಟ್ ಕೆನರಾ ಬ್ಯಾಂಕ್‌ಗೆ ಸೂಚಿಸಿದೆ.
ಅಮಾನತ್ ಬ್ಯಾಂಕ್‌ನಲ್ಲಿ ಭಾರಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಲೇರಿತ್ತು.  ನಂತರ ಅಮಾನತ್ ಬ್ಯಾಂಕ್ ಅನ್ನು  ಕೆನರಾ ಬ್ಯಾಂಕ್ ಜತೆ ವಿಲೀನಕ್ಕೆ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ವಿಲೀನಗೊಂಡರೆ ತಮಗೆ ಹೊರೆಯಾಗುವುದಾಗಿ ಕೆನರಾ ಬ್ಯಾಂಕ್ ವಾದ ಮಂಡಿಸಿತು.
ಸುಮಾರು 2 ಲಕ್ಷ ಖಾತೆದಾರರು ಒಂದು ಲಕ್ಷಕ್ಕಿಂತ ಕಡಿಮೆ ಮೊತ್ತವನ್ನು ಇರಿಸಿದ್ದು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಹಣ ಬಿಡುಗಡೆಗೊಳಿಸುವಂತೆ ಖಾತೆದಾರರ ಪರ ವಕೀಲ ಏಕಸದಸ್ಯ ಪೀಠದ ಗಮನಕ್ಕೆ ತಂದರು. ವಿಚಾರಣೆ ನಡೆಸಿದ ನ್ಯಾ.ರಾಮ್ ಮೋಹನ್ ರೆಡ್ಡಿ ಪೀಠ, ಅಮಾನತ್ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕರು ಹೊಟ್ಟೆ ತುಂಬಿದ್ದವರು. ಈಗ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಲೇರಿರುವವರು ಕೂಲಿ ಕಾರ್ಮಿಕರು, ಮೆಕಾನಿಕ್ ಹಾಗೂ ಜೀವನೋಪಾಯಕ್ಕೆ ಇನ್ನಿತರ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್‌ನ ಅಧ್ಯಕ್ಷರಿಗೇನು ಮನುಷ್ಯತ್ವವೇ ಇಲ್ಲವೇ ಎಂದು ಅಸಮಧಾನ ವ್ಯಕ್ತಪಡಿಸಿದರು. ಅಮಾನತ್ ಬ್ಯಾಂಕ್‌ನ ಆಸ್ತಿ ಮರುಮೌಲ್ಯಮಾಪನ ಮಾಡಿ ಜು.18ರ ಒಳಗೆ ಸಲ್ಲಿಸುವಂತೆ ಏಕಸದಸ್ಯ ಪೀಠ ಕೆನರಾ ಬ್ಯಾಂಕ್‌ಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com