ಬೆಂಗಳೂರು: ಸಾಮಾಜಿಕ ತಾಣದಲ್ಲಿ ಅನಾಗರಿಕವಾಗಿ ಪ್ರಗತಿಪರ ಮಹಿಳಾ ಹೋರಾಟಗಾರ್ತಿ ಪ್ರಭಾ ಎನ್. ಬೆಲವಂಗಲ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿರುವ ವಿ.ಆರ್.ಭಟ್ ಅವರನ್ನು ಗೂಂಡಾ ಕಾಯ್ದೆ ಅನ್ವಯ ಕೂಡಲೇ ಬಂಧಿಸುವಂತೆ ಸಿಪಿಎಂ ಆಗ್ರಹಿಸಿದೆ.
ರಾಜ್ಯ ಸರ್ಕಾರ ಈ ವಿಷಯದಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಭಾರಿ ಪ್ರತಿಭಟನೆ ನಡೆಸುವುದಾಗಿ ಸಿಪಿಎಂ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಎಚ್ಚರಿಸಿದ್ದಾರೆ. ಕಮೆಂಟ್ ಹಾಕುವ ಭರದಲ್ಲಿ, ನಿಮ್ಮಂಥವರನ್ನು ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸಬೇಕು ಎಂದು ವಿ.ಆರ್. ಭಟ್ ಕಮೆಂಟ್ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾ ಎನ್. ಬೆಲವಂಗಲ ಚಂದ್ರ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಚೋದನಕಾರಿ ಕಮೆಂಟ್: ಸೈಬರ್ ಪೊಲೀಸರಿಗೆ ಮೊರೆ
ಬೆಂಗಳೂರು: ಹೋರಾಟಗಾರ್ತಿ ಪ್ರಭಾ ಎನ್. ಬೆಳವಂಗಲ ಅವರ ಫೇಸ್ಬುಕ್ ಸ್ಟೇಟಸ್ಗೆ ಪ್ರಚೋದನಕಾರಿ ಕಮೆಂಟ್ ಮಾಡಿರುವ ಪ್ರಕರಣದ ಬಗ್ಗೆ ತಾಂತ್ರಿಕ ಸಲಹೆ ಪಡೆಯಲು ಪೊಲೀಸರು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಸಾಮಾಜಿಕ ತಾಣದಲ್ಲಿ ನಡೆದ ಘಟನೆಯಾಗಿರುವುದರಿಂದ ಸೈಬರ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಅಧಿಕಾರಿಗಳು ಫೇಸ್ಬುಕ್ನ ಸ್ಟೇಟಸ್ ಬಗ್ಗೆ ಮಾಹಿತಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಂದ್ರ ಬಡಾವಣೆ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿ.ಆರ್.ಭಟ್ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯರು ಮಂಗಳವಾರ ಪುರಭವನ ಎದುರು ಪ್ರತಿಭಟನೆ ನಡೆಸಿದರು.