ಕನ್ನಡಪ್ರಭ ವಾರ್ತೆ ಚಾಮರಾಜನಗರ ಜು. 30
9 ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ, 19 ವರ್ಷ ಬಳಿಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅದೂ ಆಕೆ ನ್ಯಾಯಕ್ಕಾಗಿ ಸಿಡಿದೆದ್ದರಿಂದ.
ಕೊಳ್ಳೇಗಾಲ ತಾಲೂಕಿನ ಭದ್ರಯ್ಯನಹುಂಡಿಯ ಬಾಲಕಿ ಮೇಲೆ ಅದೇ ಗ್ರಾಮದ ಸಿದ್ದರಾಜು ಎಂಬ ಯುವಕ 1995ರ ಜುಲೈನಲ್ಲಿ ಅತ್ಯಾಚಾರ ನಡೆಸಿದ್ದ. ನಂತರ ಗ್ರಾಮಸ್ಥರ ಸಮ್ಮುಖದಲ್ಲಿ ಸಂಧಾನ ನಡೆದು, ಸಿದ್ದರಾಜು ಬಾಲಕಿ ಪೋಷಕರಿಂದ 20 ಸಾವಿರ ವರದಕ್ಷಿಣೆ ಪಡೆದು ಬಾಲ್ಯ ವಿವಾಹವಾಗಿದ್ದ. ಆದರೆ ವಯಸ್ಸು ಚಿಕ್ಕದು ಎಂದು ಬಾಲಕಿಯನ್ನು ತಂದೆ ಮನೆಯಲ್ಲೇ ಬಿಡಲಾಗಿತ್ತು. 2000ನೇ ಇಸವಿಯಲ್ಲಿ ಬಾಲಕಿ ಋತುಮತಿಯಾಗಿದ್ದು, ಮಗಳನ್ನು ಮನೆಗೆ ಕರೆದೊಯ್ಯಿರಿ ಎಂದು ಈಕೆಯ ಪೋಷಕರು ಸಿದ್ದರಾಜು ತಂದೆ, ತಾಯಿಗೆ ಮನವಿ ಮಾಡಿದ್ದಾರೆ. ಆದರೆ ಮಗ ನಾಪತ್ತೆಯಾಗಿದ್ದಾನೆ ಎಂಬ ಕಾರಣ ನೀಡಿ ಇಷ್ಟು ವರ್ಷಗಳ ಕಾಲ ಸುಮ್ಮನಾಗಿಸಿದ್ದರು. ಕೆಲವು ತಿಂಗಳ ಹಿಂದೆ ಸಂಬಂಧಿಕರ ವಿವಾಹದಲ್ಲಿ ಸಿದ್ದರಾಜು ಕಾಣಿಸಿಕೊಂಡಿದ್ದಾನೆ. ಜತೆಗೆ ಮತ್ತೊಂದು ವಿವಾಹವಾಗಿ, ಬೇರೆ ಕಡೆ ನೆಲೆಸಿದ್ದಾನೆ ಎಂಬ ವಿಚಾರ ತಿಳಿದಿದೆ.
ಈಗ ಮಹಿಳೆ (19 ವರ್ಷದ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ) ನ್ಯಾಯ ಕೇಳಿ ಪೊಲೀಸ್ ಠಾಣೆಗೆ ಹೋದರೆ, ಸತಾಯಿಸಿದ್ದು, ಕೊನೆಗೆ ಮಹಿಳಾ ಸಂಘಟನೆಗಳ ನೆರವಿನಿಂದ ಸಿದ್ದರಾಜು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಆರೋಪಿಯನ್ನು ಇನ್ನೂ ಬಂಧಿಸಿಲ್ಲ.