ಬೆಂಗಳೂರಿಗರಿಗೆ ಲಾಕ್ ಡೌನ್ ಕಲಿಸಿದ ಪಾಠ
ಬೆಂಗಳೂರಿಗರು ಎಂದರೆ ಅಪಾರ್ಟ್ ಮೆಂಟ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು, ಪಕ್ಕದ ಮನೆಯವರನ್ನು ಮಾತನಾಡಿಸದವರು ಎಂಬಿತ್ಯಾದಿ ಬಿರುದುಗಳಿವೆ. ಇವೆಲ್ಲವಕ್ಕೂ ವಿರುದ್ಧವಾದ ಸಂಗತಿಯೊಂದು ನೂತನ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
Published: 15th August 2021 11:44 AM | Last Updated: 15th August 2021 11:54 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೊರೊನಾ ಸಾಂಕ್ರಾಮಿಕ ಬೆಂಗಳೂರಿನಲ್ಲಿ ಸೃಷ್ಟಿಸಿದ ಅಲ್ಲಣವನ್ನು ಯಾರೂ ಮರೆತಿಲ್ಲ. ಲಾಕ್ ಡೌನ್ ನಿಯಮಾವಳಿಯನ್ನು ಪೊಲೀಸರು ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಸುದ್ದಿ ಮಾಧ್ಯಮಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಬೆಂಗಳೂರಿನದ್ದೇ ಹೈಲೈಟ್. ಕಿಕ್ಕಿರಿದು ತುಂಬಿರುವ ಬೆಂಗಳೂರು ಮಹಾನಗರದಲ್ಲಿ ಲಾಕ್ ಡೌನ್ ನಿಂದ ಉಂಟಾದ ಅಧ್ವಾನ ಅಷ್ಟಿಷ್ಟಲ್ಲ.
ಎಂದಿನಿಂದಲೂ ಬೆಂಗಳೂರಿಗರು ಎಂದರೆ ಅಪಾರ್ಟ್ ಮೆಂಟ್ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು, ಪಕ್ಕದ ಮನೆಯವರನ್ನು ಮಾತನಾಡಿಸದವರು, ದ್ವೀಪಗಳಂತಿರುವ ಮೈಕ್ರೊ ಕುಟುಂಬದಂಥವರು ಎಂಬಿತ್ಯಾದಿ ಬಿರುದುಗಳಿವೆ. ಇವೆಲ್ಲವಕ್ಕೂ ವಿರುದ್ಧವಾದ ಸಂಗತಿಯೊಂದು ಮೈಗೇಟ್ ಎನ್ನುವ ಸಂಸ್ಥೆ ನಡೆಸಿದ ನೂತನ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಶೇ.98.79 ಪ್ರತಿಶತ ಬೆಂಗಳೂರಿಗರು ನೆರೆಹೊರೆಯವರೊಂದಿಗೆ ಚೆನ್ನಾಗಿ ಬೆರೆತಿದ್ದೇ ಅಲ್ಲದೆ ಪರಸ್ಪರ ಸ್ನೇಹ ಸಹಕಾರದಿಂದ ಇದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ವಾಸ ಪ್ರದೇಶದ ಸುತ್ತಮುತ್ತಲಿನ ಕಿರಾಣಿ ಅಂಗಡಿಗಳು ಸೇರಿದಂತೆ ಚಿಕ್ಕಪುಟ್ಟ ವ್ಯಾಪಾರ ಮಳಿಗೆಗಳಲ್ಲೇ ವಸ್ತುಗಳನ್ನು ಕೊಳ್ಳುವ ಮೂಲಕ ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡಿದ್ದಾಗಿಯೂ ಸಮೀಕ್ಷೆ ಬಹಿರಂಗ ಪಡಿಸಿದೆ.
ಇದುವರೆಗೂ ತಾವಾಯಿತು ತಮ್ಮ ಕುಟುಂಬವಾಯ್ತು ಎಂಬಂತೆ ಇದ್ದವರು ಲಾಕ್ ಡೌನ್ ಸಮಯದಲ್ಲಿ ಇದೇ ಮೊದಲ ಬಾರಿಗೆ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ ಹೊಂದಲು ಲಾಕ್ ಡೌನ್ ಕಾರಣವಾಗಿರುವುದು ಕುತೂಹಲಕರ ಸಂಗತಿ. ಅಲ್ಲದೆ ಶೇ.80 ರಷ್ಟು ಬೆಂಗಳೂರಿಗರು ನೆರೆಹೊರೆಯವರ ಮೇಲೆ ಅವಲಂಬನೆ ಬೆಳೆಸಿಕೊಂಡಿದ್ದಾರೆ ಎಂಬ ಸಂಗತಿಯನ್ನೂ ಸಮೀಕ್ಷೆ ಹೊರಹಾಕಿದೆ. ದೇಶದ 12 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.