ಬಾಗಲಕೋಟೆ: ಜಲಾಶಯಗಳಿಂದ ನೀರಾವರಿಗೊಂಡ ತರಿಭೂಮಿಯಲ್ಲಿ ಧೀರ್ಘಾವಧಿಯ ಏಕಮಾತ್ರ ಬೆಳೆ ಪಡೆಯವುದರಿಂದ ಮುಂಬರುವ ದಿನಗಳಲ್ಲಿ ಭೂಮಿ ಹದಗಡಲಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಬಿ. ದಂಡಿನ ಅಭಿಪ್ರಾಯಪಟ್ಟರು.
ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಶನಿವಾರ ವಾರ್ತಾ ಇಲಾಖೆ ಹಮ್ಮಿಕೊಂಡ ವಿಶ್ವ ತರಿಭೂಮಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವೈಜ್ಞಾನಿಕ ರೀತಿಯಲ್ಲಿ ನೀರಿನ ಸದ್ಬಳಕೆಯಾದಲ್ಲಿ ಮಾತ್ರ ಭೂಮಿ ಸುಸ್ಥಿತಿಯಲ್ಲಿರುತ್ತದೆ. ದಶಕಗಳವರೆಗೆ ಹೆಚ್ಚು ನೀರನ್ನು ಬಳಸಿ ಕೇವಲ ಕಬ್ಬು ಬೆಳೆದಲ್ಲಿ ಬರುವ ದಿನಗಳಲ್ಲಿ ಭೂಮಿ ಹಾಳಾಗುತ್ತದೆ. ಈಗಾಗಲೇ ಅನೇಕ ಕಡೆ ಕೇವಲ ಭತ್ತ ಹಾಗೂ ಕಬ್ಬು ಬೆಳೆದು ಮಣ್ಣು ಬರಡಾದ ಉದಾಹರಣೆಗಳು ಸಾಕಷ್ಟಿವೆ ಎಂದರು.
ನೀರು ನಿರ್ವಹಣೆ ಸರಿಯಾಗಿ ಮಾಡದಿದ್ದಲ್ಲಿ ಬರುವ ದಿನಗಳಲ್ಲಿ ತರಿಭೂಮಿ ಪ್ರದೇಶ ಬರಡಾಗುವುದು. ಈ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್, ಪಡಿತರ ನೀಡಿದಂತೆ ನೀರನ್ನು ಸಹ ಅಗತ್ಯ ಪ್ರಮಾಣದಲ್ಲಿ ಮಾತ್ರ ನೀಡುವ ಪದ್ಧತಿ ಜಾರಿಗೊಳಿಸುವ ಅನಿವಾರ್ಯತೆಯಿದೆ ಎಂದು ಡಾ. ದಂಡಿನ ತಿಳಿಸಿದರು.
ದೇಶದಲ್ಲಿ ರಾಜಸ್ಥಾನದ ನಂತರ ಕರ್ನಾಟಕ ಅತೀ ಹೆಚ್ಚು ಒಣ ಪ್ರದೇಶ ಹೊಂದಿದ್ದು, ಒಂದೆಡೆ ನೀರಿನ ವಿಪರೀತ ಬಳಕೆಯಾದರೆ ಇನ್ನೊಂದೆಡೆ ನೀರಿಗೆ ಹಾಹಾಕಾರ ನಡೆಯುತ್ತಿದೆ. ನದಿಗಳಿಗೆ ಅಡ್ಡಲಾಗಿ ಚಿಕ್ಕ ಬ್ಯಾರೇಜ್, ಚೆಕ್ಡ್ಯಾಂ ಕಟ್ಟುವುದು ಉತ್ತಮ ರೂಢಿಯೆಂದು ಅವರು ತಿಳಿಸಿದರು.
ತೋಟಗಾರಿಕೆ ವಿವಿಯ ಕುಲಸಚಿವ ಡಾ. ಎ.ಬಿ.ಪಾಟೀಲ ಮಾತನಾಡಿ, 1998 ರಿಂದ ವಿಶ್ವಸಂಸ್ಥೆಯ ಕೆಲ ವಿಜ್ಞಾನಿಗಳು ಇರಾನ್ನ ರಾಮ್ಸನ್ ಎಂಬಲ್ಲಿ ತರಿಭೂಮಿಯ ಸಂರಕ್ಷಣೆ ಬಗ್ಗೆ ಆಂದೋಲನ ಆರಂಭಿಸಿದರು. ಹೆಚ್ಚು ತಂಪಾಗಿರುವ ಪ್ರದೇಶಗಳು, ಜೌಗು, ಕೆರೆ, ಹಳ್ಳಗಳ ನೀರಿನ ಪ್ರದೇಶಗಳ ಸಂರಕ್ಷಣೆಗೆ ಈಗಲೂ ತರಿಭೂಮಿ ದಿನಾಚರಣೆ ಆಚರಿಸಲಾಗುತ್ತಿದೆ. ಈ ತರಿಭೂಮಿಯಲ್ಲಿ ಅನೇಕ ಜೀವವೈವಿದ್ಯತೆ, ನೂರಾರು ಜಾತಿಯ ಪಕ್ಷಿಗಳು ಸರಿಸೃಪಗಳು ಹಾಗೂ ಇನ್ನೀತರ ಜೀವಿಗಳು ವಾಸಿಸುತ್ತಿವೆ. ಕೆರೆ, ಹಳ್ಳಗಳ ಪ್ರದೇಶಗಳನ್ನು ಒತ್ತುವರಿ ಮಾಡದಂತೆ ತಡೆಯಬೇಕು. ಹೆಚ್ಚು ನೀರಾವರಿಯಿಂದಾಗಿ ಯು.ಕೆ.ಪಿ ಪ್ರದೇಶದಲ್ಲೀಗ ಭೂಸವಕಳಿ ಹೆಚ್ಚುತ್ತಿದೆಯೆಂದು ತಿಳಿಸಿದರು.
ತುಂಗಭದ್ರಾ ಜಲಾಶಯದಿಂದ ವಿಪರೀತ ನೀರಾವರಿ ಹಾಗೂ ಏಕಜಾತಿ ಬೆಳೆ ಹಾಗೂ ರಸಾಯನಿಕ ಬಳಕೆಯಿಂದಾಗಿ 75 ಸಾವಿರ ಹೆಕ್ಷೇರ್ ಭೂಮಿ ಈಗಾಗಲೇ ನಾಶವಾಗಿದ್ದು, ಏನನ್ನೂ ಬೆಳೆಯದ ಜೌಗು ಪ್ರದೇಶವಾಗಿ ಮಾರ್ಪಟ್ಟಿದೆ. ಯು.ಕೆ.ಪಿ ಜಲಾಶಯದಿಂದಾಗಿ 17700 ಹೆಕ್ಟೇರ್ ಸಾವಿರ ಭೂಮಿಯು ಈಗಾಗಲೇ ಕೃಷಿಗೆ ನಿರೂಪಯುಕ್ತವಾಗಿದ್ದು, ರೈತರು ಈಗಲೇ ಎಚ್ಚೆತ್ತುಕೊಂಡಲ್ಲಿ ತರಿಭೂಮಿಯನ್ನು ಸಂರಕ್ಷಿಸಬಹುದಾಗಿದೆ ಎಂದರು.
ಬಿಜಾಪುರದಲ್ಲಿ ಆದಿಲ್ಶಾಹಿ ನಿರ್ಮಿಸಿದ ಅನೇಕ ಕೆರೆಗಳು, ಬಾವಿಗಳು ಈಗ ವಿನಾಶದ ಅಂಚಿನಲ್ಲಿದ್ದು, ಈ ಭಾಗದ ಜನರು ನೀರು ನಿರ್ವಹಣೆಯ ಪದ್ಧತಿಯನ್ನು ರೂಢಿಸಿಕೊಳ್ಳಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ತರಿಭೂಮಿ ಸಂರಕ್ಷಣೆ ಅಗತ್ಯವಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಅರಿವು ಮೂಡಿಸಬೇಕೆಂದು ಹೇಳಿದ ಅವರು, ಡಾ.ದಂಡಿನ ಅವರಿಗೆ ಮಲೆನಾಡಿನ ಪ್ರಮುಖ ಬೇಡಿಕೆಯ ಔಷಧಿ ಹಾಗೂ ಪಾನೀಯವಾಗಿ ಬಳಸುವ ಹಣ್ಣಿನ ಸಸಿ ಅಮಸೋಲ ಅಥವಾ ಪುನರ್ಪಳಯೆಂದು ಕರೆಯಲ್ಪಡುವ ಗಾರ್ಸಿನಿಯಾ ಇಂಡಿಕಾ ಸಸ್ಯವನ್ನು ಕೊಡುಗೆಯಾಗಿ ನೀಡಿದರು.
ಡಾ. ಅಶೋಕ ಆಲೂರ, ಡಾ.ವಸಂತ ಗಾಣಿಗೇರ, ಡಾ. ಲಕ್ಷ್ಮಣರೆಡ್ಡಿ, ಡಾ.ಐ.ಬಿ. ಬಿರಾದಾರ, ಡಾ. ಹಾದಿಮನಿ, ಡಾ.ರಾಜಶೇಖರ, ಡಾ. ಭುವನೇಶ್ವರಿ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.