- ಶ್ರೀಶೈಲ ಮಠದ
ಬೆಳಗಾವಿ: ಉತ್ತರ ಕರ್ನಾಟಕ ಜನತೆಯ ಜೀವನಾಡಿ ಮಲಪ್ರಭಾ ನದಿ ಪಾತ್ರದ ಕಳಸಾ- ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ 30 ವರ್ಷಗಳ ಕಾಲ ಹೋರಾಟ ಮಾಡಿದ್ದಲ್ಲದೇ, ರಕ್ತದಿಂದ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಈ ಭಾಗದ ಜನತೆಯ ಅನುಕಂಪ ಸಂಪಾದಿಸಿ, ಈಗ ಮುಖ್ಯಮಂತ್ರಿಯಾಗಿರುವ ಜಗದೀಶ ಶೆಟ್ಟರ್ ಅವರ ಕೈಯಲ್ಲಿ ಸರ್ಕಾರದ ಖಜಾನೆ ಕೀಲಿ ಕೈ ಇದ್ದರೂ ಈ ಯೋಜನೆಗೆ ಬಜೆಟ್ನಲ್ಲಿ ಆದ್ಯತೆ ನೀಡಿಲ್ಲ. ಈ ಮೂಲಕ ಉತ್ತರ ಕರ್ನಾಟಕ ಜನತೆಗೆ ಅನ್ಯಾಯ ಮಾಡಲಾಗಿದೆ.
ಬಿಜೆಪಿ ಕಳಸಾ- ಬಂಡೂರಿ ಯೋಜನೆ ಹೆಸರಿನಲ್ಲೇ ಅಧಿಕಾರಕ್ಕೆ ಬಂದು ಅವಧಿ ಮುಗಿಯುತ್ತ ಬಂದಿದ್ದರೂ ಈ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ನರಗುಂದದಲ್ಲಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಬದ್ಧ ಎಂದು ಸಿಎಂ ಶೆಟ್ಟರ್ ಘೋಷಣೆ ಮಾಡಿ ಜನತೆಯಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಹೋದರು. ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಮನ್ನಣೆ ನೀಡಲಾಗುತ್ತದೆ ಎಂದು ಈ ಭಾಗದ ಜನರು ಬಹು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ.
ಉತ್ತರ ಕರ್ನಾಟಕ ಜನತೆಯ ಜೀವನಾಡಿಯಾಗಿರುವ ಮಲಪ್ರಭಾ ನದಿ ಪಾತ್ರದಲ್ಲಿ ಬರುವ ಕಳಸಾ ಮತ್ತು ಬಂಡೂರಿ ಹಳ್ಳಗಳು ಸೇರಿದಂತೆ ಒಟ್ಟು 6 ಸಣ್ಣ ಹಳ್ಳಗಳಾದ ಹಳತಾರ, ಗುರ್ಕಿ, ಚುರ್ಲಾ, ಪೋಟ್ಲಾ, ಬೈಲ್ ಇರ್ಥಿ ಈ ಎಲ್ಲ ಹಳ್ಳಗಳಲ್ಲಿನ ನೀರನ್ನು ಸೇರಿಸಿ ಮಲಪ್ರಭಾ ನದಿಗೆ ಜೋಡಣೆ ಮಾಡಬೇಕು. ಇದಕ್ಕೆ ಮಹಾದಾಯಿ ಕಣಿವೆ ತಿರುವು ಯೋಜನೆಯಂದು ನಾಮಕರಣ ಮಾಡಲಾಗಿದೆ. ಈ ಯೋಜನೆಯಿಂದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ 9 ತಾಲೂಕುಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ಆದರೆ, ಈ ನೀರಾವರಿ ಯೋಜನೆ ವಿಳಂಬವಾಗಲು ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಪ್ರಮುಖ ಕಾರಣ. 1964ರಲ್ಲಿಯೇ ಕೇಂದ್ರ ಸರ್ಕಾರ ಇದಕ್ಕೆ ತನ್ನ ಒಪ್ಪಿಗೆ ಸೂಚಿಸಿದೆ. ಫಾರೆಸ್ಟ್ ಕ್ಲಿಯರನ್ಸ್ ಲಭ್ಯವಾಗಿತ್ತು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಅದು ರದ್ದಾಯಿತು. ಗೋವಾ ಇದಕ್ಕೆ ತಗಾದೆ ತೆಗೆದಿದೆ. ನಮ್ಮ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಮನಸ್ಸು ಮಾಡುತ್ತಿಲ್ಲ. ಹಾಗಾಗಿ ಈಯೋಜನೆ ವಿಳಂಬವಾಗುತ್ತಲೇ ಸಾಗಿದೆ.