ಚಿಕ್ಕೋಡಿ: ಇಲ್ಲಿನ ಹಳೆ ತಹಸೀಲ್ದಾರ ಕಚೇರಿಯಲ್ಲಿ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಪ್ರಾರಂಭಿಸುವ ಉದ್ದೇಶದಿಂದ ಸರ್ಕಾರ ರು. 1 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಪ್ರಕಾಶ ಹುಕ್ಕೇರಿ ಹೇಳಿದರು.
ಇಲ್ಲಿನ ನ್ಯಾಯಾಲಯದ ಸಭಾಭವನದಲ್ಲಿ ಸೋಮವಾರ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಮಂಜೂರಾತಿ ಆದೇಶ ಪತ್ರವನ್ನು ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಕಾಮಗಾರಿ ಪ್ರಾರಂಭಿಸಿಲು ರು. 60 ಲಕ್ಷ ಅನುದಾನ ಬಿಡುಗಡೆ ಯಾಗಿದೆ. ಜೊತೆಗೆ 2013-14ರಲ್ಲಿ ಮಳಿಗೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದು ತಿಳಿಸಿದ ಅವರು, ಕಾಮಗಾರಿ ಆರಂಭಿಸಿದ ನಂತರ ರು. 40 ಲಕ್ಷ ಅನುದಾನ ಬಿಡುಗಡೆಯಾಗುವುದು ಎಂದು ತಿಳಿಸಿದರು. ನ್ಯಾಯಾಧೀಶ ಸಿ.ವ್ಹಿ. ಮರಗೂರ, ಡಿ.ವೈ.ಬಸ್ಸಾಪೂರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಜೆ.ಎನ್. ತೆಂಗಿನಕಾಯಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಜಿ. ಹಿರೇಮಠ, ಕಾರ್ಯದರ್ಶಿ ಆರ್.ಬಿ. ಸಂಗ್ರೋಳಿ, ಉಪಾಧ್ಯಕ್ಷ ಎಂ.ಕೆ. ಪೂಜೇರಿ, ಸಿ.ಬಿ. ಭೀಮಣ್ಣವರ, ಸತೀಶ ಕುಲಕರ್ಣಿ, ಅಶೋಕ ಹರಗಾಪೂರೆ, ಮುದ್ದುಸರ ಜಮಾದಾರ, ಶ್ರೀನಿವಾಸ ಘಸ್ತಿ ಉಪಸ್ಥಿತರಿದ್ದರು.