ಬೆಳಗಾವಿ: ಕೃಷಿ ಸಚಿವ ಉಮೇಶ ಕತ್ತಿ ಮತ್ತೊಮ್ಮೆ ವಿವಾದದ ಹೇಳಿಕೆಯ ಕತ್ತಿ ಬೀಸಿದ್ದಾರೆ.
ಕಾಂಗ್ರೆಸ್ ಸೇರುತ್ತಾರಂತೆ, ಕೆಜೆಪಿಯತ್ತ ಒಲವು ಹೊಂದಿದ್ದಾರಂತೆ ಎಂಬ ವದಂತಿಗಳಿಗೆ ಪುಷ್ಟಿ ಕೊಡುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಜಗದೀಶ ಶೆಟ್ಟರ್ ಎಲ್ಲರೂ ನನ್ನ ನಾಯಕರೇ ಎನ್ನುವ ಮೂಲ ತಮ್ಮ ರಾಜಕೀಯ ನಡೆ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಲ್ಲ ಪಕ್ಷಗಳಲ್ಲೂ ನನ್ನ ನಾಯಕರು ಇದ್ದಾರೆ. ಬಿಜೆಪಿ ಸರ್ಕಾರ ತನ್ನ ಅಧಿಕಾರವಧಿ ಪೂರ್ಣಗೊಳಿಸುತ್ತದೆ. ನಂತರವಷ್ಟೇ ರಾಜಕೀಯ ನಡೆ ಕುರಿತು ಸ್ಪಷ್ಟ ನಿಲುವು ಪ್ರಕಟಿಸಲಾಗುವುದು ಎಂದು ಹೇಳಿದರು.
ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ತೊರೆದು ಕೆಜೆಪಿ ಸೇರುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕತ್ತಿ, ರಾಜಿನಾಮೆ ನೀಡುವಂತೆ ಮಾಜಿ ಸಿಎಂ ಬಿಎಸ್ವೈ ಅವರಾಗಲಿ, ಬೇರೆ ಇತರೆ ನಾಯಕರಾಗಲಿ ನನ್ನನ್ನು ಸಂಪರ್ಕಿಸಿಲ್ಲ. ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸುತ್ತದೆ. ಶೆಟ್ಟರ್ ಅವರೇ ಬಜೆಟ್ ಮಂಡಿಸುವುದು ಶತಸಿದ್ಧ. 13 ಶಾಸಕರು ರಾಜಿನಾಮೆ ನೀಡಿದರೂ ಸರ್ಕಾರ ಬಹುಮತ ಕಳೆದುಕೊಳ್ಳುವುದಿಲ್ಲ. ರಾಜ್ಯಪಾಲರು ಬಹುಮತ ಪ್ರದರ್ಶನಕ್ಕೆ ಸೂಚಿಸದರೆ ಸದನದಲ್ಲಿ ಬಹುಮತ ಪ್ರದರ್ಶಿಸಲಾಗುವುದು ಎಂದರು.
ರಾಜಕೀಯ ಎಂದ ಮೇಲೆ ನಿರಂತರ ಚರ್ಚೆ, ಸಂಘರ್ಷಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಮಾಜಿ ಸಚಿವ ಎ.ಬಿ. ಪಾಟೀಲ ಅವರೊಂದಿಗೆ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳಿವೆ ನಿಜ. ಆದರೆ, ನಾವು ರಾಜಕೀಯ ಹೊರತುಪಡಿಸಿ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದೇವೆ ಎಂದರು.
ತೀರ್ಪಿಗೆ ಬದ್ಧ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೆಗೆದುಕೊಳ್ಳುವ ತೀರ್ಪಿಗೆ ತಲೆ ಭಾಗುವೆ ಎಂದ ಸಚಿವ ಕತ್ತಿ ಅವರು, 2020ರ ವೇಳೆಗೆ ಜನಸಂಖ್ಯೆ ಆಧಾರದ ಮೇಲೆ ದೇಶದಲ್ಲಿ 50 ಹೊಸ ರಾಜ್ಯಗಳು ರಚನೆಯಾದ್ದಲ್ಲಿ, ಅದರಲ್ಲಿ ಉತ್ತರ ಕರ್ನಾಟಕ ಕೂಡ ಪ್ರತ್ಯೇಕ ರಾಜ್ಯವಾಗಬಹುದೆಂಬ ಅಭಿಲಾಷೆ ವ್ಯಕ್ತಪಡಿಸಿದ್ದೇನೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ರು. 3000 ಸಾವಿರ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಶೆಟ್ಟರ ಅವರಿಗೆ ಮನವಿ ಮಾಡಿದ್ದು, ಅದರಲ್ಲೂ ಎಸ್ಸಿ, ಎಸ್ಟಿ ಸಮುದಾಯದ ರೈತರಿಗಾಗಿ ಜಲಾನಯನ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ಪಶುಸಂಗೋಪನಾ ಇಲಾಖೆಯ ವಿವಿಧ ಸವಲತ್ತುಗಳನ್ನು ಒಟ್ಟುಗೂಡಿಸಿ ವಾಜಪೇಯಿ ಸುವರ್ಣ ಭೂಮಿ ಯೋಜನೆಯನ್ನು ಜಾರಿಗೊಳಿಸುವಂತೆ ಕೋರಲಾಗಿದೆ. ಜತೆಗೆ ಈ ಸಲದ ಕೃಷಿ ಬಜೆಟ್ನಲ್ಲಿ ಪ್ರಾಯೋಗಿಕವಾಗಿ 4 ಜಿಲ್ಲೆಯಲ್ಲಿ ಶೌರ ಶಕ್ತಿ ಚಾಲಿತ ಪಂಪ ಸೆಟ್ ಅಳವಡಿಸುವುದು ಹಾಗೂ ಶೇ.70 ರಷ್ಟು ಕೃಷಿ ಭೂಮಿಗೆ ಹನಿ ನೀರಾವರಿ ಪದ್ಧತಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.