ಬೆಳಗಾವಿ: ಸಂವಿಧಾನದ ಆಶಯಗಳನ್ನು ಪ್ರಗತಿಪರ ಭಾರತ ಪೂರೈಸುತ್ತಿದೆ. ಆದರೆ, ಮಹಿಳೆಯರಲ್ಲಿ ಕಾಣುತ್ತಿರುವ ಸಾಮಾಜಿಕ ಅಭದ್ರತೆ ದೇಶಕ್ಕೆ ಬಹು ದೊಡ್ಡ ಸವಾಲಾಗಿದೆ. ನಾವು ನೈತಿಕವಾಗಿ ಕುಸಿಯುತ್ತಿರುವುದು ಚಿಂತೆಗೀಡು ಮಾಡಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಆರ್. ಅನಂತನ್ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಣಿ ಚನ್ನಮ್ಮ ವಿವಿಯಲ್ಲಿ ಶನಿವಾರ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತವು ಸರ್ವತಂತ್ರ, ಸ್ವತಂತ್ರ ಪ್ರಜಾಸತ್ತಾತ್ಮಕ, ಸಮಾಜವಾದಿ ರಾಷ್ಟ್ರವಾಗಿ 64 ವಸಂತಗಳನ್ನು ಕಂಡಿದೆ.
ಸ್ವಾಮಿ ವಿವೇಕಾನಂದರು ಜನ್ಮ ತಾಳಿದ 150ನೇ ಸಂವತ್ಸದಲ್ಲಿದ್ದೇವೆ. ಸ್ವಾಭಿಮಾನಿ ಭಾರತದ ಕನಸು ಕಂಡವರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ಇಂದು ಭಾರತವು ಎಲ್ಲ ಕ್ಷೇತ್ರಗಳಲ್ಲಿಯೂ ಸ್ವಾವಲಂಬನೆಯನ್ನು ಕಂಡುಕೊಂಡು ಸ್ವಾಭಿಮಾನದಿಂದ ಪ್ರಪಂಚದಲ್ಲಿ ಮಾದರಿ ರಾಷ್ಟ್ರವಾಗುತ್ತ ಮುನ್ನಡೆದಿದೆ ಎಂದರು.
ನಿವೃತ್ತ ಮೇಜರ್ ಜನರಲ್ ಕೆ.ಎನ್. ಮಿರ್ಜಿ ಮಾತನಾಡಿ, ವಿದ್ಯಾರ್ಥಿ ಬದುಕಿನಲ್ಲಿ ಶಿಸ್ತು, ಸಮಯಪಾಲನೆ ಹಾಗೂ ಅಧ್ಯಯನಶೀಲತೆಗಳು ಬೇಕಾಗುತ್ತವೆ. ಈ ರಾಷ್ಟ್ರ ಬಲಿಷ್ಠವಾಗಿ ನಿರ್ಮಾಣವಾಗಬೇಕಾದರೆ ಯುವಜನತೆಯಲ್ಲಿ ಇವುಗಳ ಬಗೆಗೆ ಪ್ರಜ್ಞೆ ಮೂಡಬೇಕಿದೆ ಎಂದು ಹೇಳಿದರು. ಕುಲಸಚಿವ ವಿಷ್ಣುಕಾಂತ ಚಟಪಲ್ಲಿ, ಜೆ.ಜಿ. ನಾಯಿಕ, ಹಣಕಾಸು ಅಧಿಕಾರಿ ಸಿದ್ರಾಮೇಶ್ವರ ಉಕ್ಕಲಿ ಮೊದಲಾದವರು ಇದ್ದರು. ಡಾ.ಚಂದ್ರಕಾಂತ ವಾಘ್ಮೋರೆ ಸ್ವಾಗತಿಸಿದರು. ಸುನಿಲ ವಂದಿಸಿದರು.