ಖಾಜು ಸಿಂಗೆಗೋಳ
ಇಂಡಿ: ಬಿಸಿಲಿನ ಝಳಕ್ಕೆ ಇಂಡಿ ಜನತೆ ತತ್ತರಿಸಿದ್ದಾರೆ. ಬಿಸಿಲಿನ ತಾಪಕ್ಕೆ ಜನತೆ ಮನೆ ಬಿಟ್ಟು ಹೊರಗೆ ಬರದಂತಾಗಿದೆ. ಸಂಜೆಯಾದರೂ ಬಿಸಿಲಿನ ಝಳ ಕಡಿಮೆಯಾಗುತ್ತಿಲ್ಲ.
ಮಾರ್ಚ್ ತಿಂಗಳಲ್ಲಿಯೇ ಇಂಡಿ ಪಟ್ಟಣದಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಏಪ್ರೀಲ್, ಮೇ ತಿಂಗಳಲ್ಲಿ ದೇವರೇ ಗತಿ ಎನ್ನುವಂತಾಗಿದೆ.
ಬಿಸಿಲಿನ ತಾಪ ನೀಗಿಸಿಕೊಳ್ಳಲು ಜನತೆ ಕಲ್ಲಂಗಡಿ, ಎಳನೀರು, ಕರಬುಜ ಖರೀದಿಯಲ್ಲಿ ನಿರತರಾಗಿದ್ದಾರೆ. ಪಟ್ಟಣದಲ್ಲಿ ಕಲ್ಲಂಗಡಿ ಹಾಗೂ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಪಟ್ಟಣದ ಪ್ರತಿ ರಸ್ತೆಯಲ್ಲಿ ಮೂರ್ನಾಲ್ಕು ಎಳನೀರು (ತೆಂಗು) ಮಾರಾಟಗಾರರು ಕಾಣಸಿಗುತ್ತಾರೆ. ಮಂಡ್ಯ, ಮೈಸೂರುನಿಂದ ಎಳನೀರು ತರಿಸಿಕೊಳ್ಳಲಾಗುತ್ತಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಈ ಬಾರಿ ಎಳನೀರು ಮಾರಾಟ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ಎಳನೀರು ಸಿಗುತ್ತಿಲ್ಲ. ಹೀಗಾಗಿ ಎಳನೀರ ಬೆಲೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಕಳೆದ ವರ್ಷ ಒಂದು ಎಳೆ ನೀರ ಬೆಲೆ ರು. 15 ಇದ್ದರೆ ಈ ಬಾರಿ ರು. 20ಗೆ ಮಾರಾಟ ಮಾಡಲಾಗುತ್ತದೆ. ಆದರೂ ಎಳನೀರಿನ ಅಭಾವವಿದೆ ಎಂದು ಎಳನೀರು ವ್ಯಾಪಾರಸ್ಥ ಪುಂಡಲೀಕ ಮೇತ್ರಿ ತಿಳಿಸಿದ್ದಾರೆ. ಈ ಬಾರಿ ಕಲ್ಲಂಗಡಿಗೆ ಹೆಚ್ಚು ಬೇಡಿಕೆ ಇದೆ. ಆದರೆ ನೀರಿನ ಕೊರತೆಯಿಂದ ತಾಲೂಕಿನ ರೈತರು ಕಲ್ಲಂಗಡಿ ಬೆಳೆದಿಲ್ಲ. ಬೇರೆ ಜಿಲ್ಲೆಗಳಿಂದ ಕಲ್ಲಂಗಡಿ ತಂದು ಮಾರಾಟ ಮಾಡಲಾಗುತ್ತದೆ. ಆದರೂ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಕಲ್ಲಂಗಡಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಕಳೆದ ಬಾರಿ ಕಲ್ಲಂಗಡಿ ಬೆಲೆ ರು. 20 ಯಿಂದ ರು. 30 ಇದ್ದರೆ ಈ ಬಾರಿ ರು. 50 ಹಾಗೂ ರು. 80 ಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಲ್ಲಂಗಡಿ ಮಾರಾಟಗಾರ ಸಾದಿಕ್ ಬಾಗವಾನ ತಿಳಿಸಿದ್ದಾರೆ.