ಕ.ಪ್ರ. ವಾರ್ತೆ ಬೆಳಗಾವಿ ಮಾ.29
ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರರಾಣಿ ಚನ್ನಮ್ಮನಾಳಿದ ಐತಿಹಾಸಿಕ ನೆಲ ಕಿತ್ತೂರಿಗೆ ತಾಲೂಕಾಗಿ ಅಧಿಕೃತ ಮುದ್ರೆ ಬಿದ್ದಿದೆ. ಈ ಸಂಬಂಧ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಕಂದಾಯ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.
ಕಳೆದ ವರ್ಷ ಡಿಸೆಂಬರ್ 23 ರಂದು ಕಿತ್ತೂರು ಚೆನ್ನಮ್ಮ ಉತ್ಸವದ ವೇಳೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಿತ್ತೂರನ್ನು ಹೊಸ ತಾಲೂಕು ಎಂದು ಘೋಷಿಸಿದ್ದರು. ಇದೀಗ ಐದು ತಿಂಗಳ ಬಳಿಕ ಕಿತ್ತೂರು ತಾಲೂಕು ಸ್ಥಾನಮಾನ ಪಡೆದು ಗೆಜೆಟ್ ನೊಟಿಫಿಕೇಷನ್ ಜಾರಿಯಾಗಿದೆ. ಇದು ಬೆಳಗಾವಿ ಜಿಲ್ಲೆಯ 11ನೇ ಹಾಗೂ ರಾಜ್ಯದ 177ನೇ ತಾಲೂಕಾಗಲಿದೆ.
18 ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಒಟ್ಟು 44 ಹಳ್ಳಿಗಳು ಹೊಸ ಕಿತ್ತೂರು ತಾಲೂಕು ಕೇಂದ್ರದ ವ್ಯಾಪ್ತಿಗೊಳಪಟ್ಟಿವೆ. ಈ ಎಲ್ಲ ಹಳ್ಳಿಗಳು ಕಿತ್ತೂರು ಹೋಬಳಿ ವ್ಯಾಪ್ತಿಯಲ್ಲಿರುವುದು ವಿಶೇಷ. ಅಲ್ಲದೇ, ಕಿತ್ತೂರು ವಿಧಾನಸಭೆ ಕ್ಷೇತ್ರವನ್ನು ಹೊಸ ತಾಲೂಕು ಹೊಂದಲಿದೆ. ಈಗಾಗಲೇ ಇಲ್ಲಿ ತಾಲೂಕು ಕೇಂದ್ರವಾಗಲು ಅಗತ್ಯವಿರುವ ತಹಸೀಲ್ದಾರ್ ಕಚೇರಿ, ಉಪ ನೋಂದಣಿ ಕಚೇರಿ, ದಿವಾಣಿ ನ್ಯಾಯಾಲಯ, ಖಜಾನೆ ಇಲಾಖೆ, ಲೋಕೋಪಯೋಗಿ ಇಲಾಖೆ ತಾಲೂಕು ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ.