ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಪರವಾಗಿ ಬಾಲಿವುಡ ನಟ ರಿತೇಶ ದೇಶಮುಖ ಬೆಳಗಾವಿಯಲ್ಲಿ ಶನಿವಾರ ದಿನವಿಡೀ ರೋಡ ಶೋ ನಡೆಸಿ ಮತಯಾಚಿಸಿದರು.
ಶಿವಾಜಿ ಉದ್ಯಾನದಲ್ಲಿನ ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿ ರೋಡ ಶೋ ಪ್ರಾರಂಭಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಅವರ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೇಶಮುಖ ಅವರನ್ನು ಅದ್ಧೂಯಾಗಿ ಸ್ವಾಗತಿಸಿದರು. ಶಿವಾಜಿ ಉದ್ಯಾನದಿಂದ ಪ್ರಾರಂಭವಾದ ರೋಡ್ ಶೋ ನಾಥ ಪೈ ಸರ್ಕಲ್, ಭಾರತ ನಗರ, ಪಾಟೀಲ ಗಲ್ಲಿ ಮೂಲಕ ಹಾಯ್ದು ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು.
ಮಧ್ಯಾಹ್ನ ಚನ್ನಮ್ಮ ವೃತ್ತದಿಂದ ಶನಿವಾರ ಕೂಟ, ಗಣಪತಗಲ್ಲಿ, ಮಾರುತಿ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜು ರಸ್ತೆ ಮೂಲಕ ಗಣಪತಿ ಮಂದಿರದ ಬಳಿ ರೋಡ್ ಶೋ ಮುಕ್ತಾಯಗೊಂಡಿತು.
ರೋಡ್ಶೋ ಉದ್ದಕ್ಕೂ ದೇಶಮುಖ ಅವರ ಅಭಿಮಾನಿಗಳು ಆಟೋಗ್ರಾಫ್ ಪಡೆದರು. ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಅಭಿಮಾನಿಗಳತ್ತ ಕೈ ಬಿಸುತ್ತ, ಜನರನ್ನು ಆಕರ್ಷಿಸಿದರು. ಮರಾಠಿ, ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ರಿತೀಶ ದೇಶಮುಖ ಆಯಿ, ಅಕ್ಕಾ, ಕರಾ ನಿರ್ಧಾರ ಪಕ್ಕಾ, ಹಾಥ ಲಾ ಮಾರಾ ಶಿಕ್ಕಾ ಎಂದು ಮನವಿ ಮಾಡಿದರು.
ಬೆಳಗಾವಿಗೂ ನನ್ನ ಕುಟುಂಬಕ್ಕೆ ಅತ್ಯಂತ ಹಳೆಯ ಸಂಬಂಧ. ನನ್ನ ತಂದೆ ಅನೇಕ ಬಾರಿ ಬೆಳಗಾವಿಗೆ ಬಂದು ಹೋಗಿದ್ದಾರೆ. ಹೀಗಾಗಿ ಬೆಳಗಾವಿ ವಾತಾವರಣ ಇಲ್ಲಿಯ ಬಹು ಭಾಷಾ ಸಂಸ್ಕೃತಿ, ಭಾಷಾ ಸೌಹಾರ್ದತೆಗೆ ಮಾದರಿಯಾಗಿದೆ. ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಮಹಿಳೆಗೆ ಟಿಕೆಟ್ ನೀಡಿದೆ. ಲಕ್ಷ್ಮಿ ಹೆಬ್ಬಾಳಕರ ಅರ್ಹ ಅಭ್ಯರ್ಥಿ. ಚುನಾವಣೆಯಲ್ಲಿ ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ, ಶಾಸಕ ಫಿರೋಜ್ ಸೇಠ್, ರಾಜು ಸೇಠ್, ನಗರ ಸೇವಕರಾದ ಸರಳಾ ಹೆರೇಕರ, ಪುಷ್ಪಾ ಪರ್ವತರಾವ್, ಮಧುಶ್ರೀ ದೇಶಪಾಂಡೆ ತೆರೆದ ಜೀಪಿನಲ್ಲಿ ನಟ ರಿತೀಶ ಅವರೊಂದಿಗೆ ಇದ್ದರು.