ಬೆಳಗಾವಿ: ಇಲ್ಲಿನ ಆಂಜನೇಯ ನಗರದಲ್ಲಿರುವ ಕಾರ್ಪೋರೇಶನ್ ಬ್ಯಾಂಕ್ನ ಎಟಿಎಂ ಯಂತ್ರವನ್ನು ಹೊತ್ತೊಯ್ಯುವ ವಿಫಲ ಯತ್ನವನ್ನು ಮಹಿಳೆ ಸೇರಿ ಆರು ಜನರ ದುಷ್ಕರ್ಮಿಗಳ ತಂಡ ನಡೆಸಿದೆ.
ಎಟಿಎಂ ಕೇಂದ್ರದ ಬಳಿ ಬೆಳಗಿನ ಜಾವ 2.30ರ ಹೊತ್ತಿಗೆ ಟಾಟಾ ಸುಮೋದಲ್ಲಿ ಆರು ಜನ ಬಂದಿದ್ದಾರೆ. ಅವರಲ್ಲಿ ಬುರ್ಖಾಧಾರಿ ಮಹಿಳೆಯೊಬ್ಬಳು ಕೆಳಕ್ಕಿಳಿದು ಎಟಿಎಂ ಕೇಂದ್ರಕ್ಕೆ ಹೋಗಲು ಯತ್ನಿಸಿದ್ದಾಳೆ.
ಸಂಶಯಗೊಂಡ ಭದ್ರತಾ ಸಿಬ್ಬಂದಿ ಮುಖದ ಮೇಲಿನ ಪರದೆ ತೆಗೆಯುವಂತೆ ಸೂಚಿಸಿದ್ದಾನೆ. ಮಹಿಳಾ ಸಿಬ್ಬಂದಿ ತಕ್ಷಣ ಖಾರದಪುಡಿ ತೆಗೆದು ಆತನ ಕಣ್ಣಿಗೆ ಎರಚಿದ್ದಾಳೆ. ಆಗ ವಾಹನದಿಂದ ಇಳಿದು ಬಂದ ಐವರಲ್ಲಿ ಒಬ್ಬ ಭದ್ರತಾ ಸಿಬ್ಬಂದಿಯ ಕುತ್ತಿಗೆಗೆ ಮಚ್ಚು ಹಿಡಿದು ಹೊರಕ್ಕೆ ಕರೆದೊಯ್ದಿದ್ದಾನೆ. ಬಳಿಕ ಎಟಿಎಂ ಕೇಂದ್ರದ ಒಳಗೆ ಹೋದ ಐವರು ಯಂತ್ರ ಕಿತ್ತೊಯ್ಯಲು ಹರಸಾಹಸ ಮಾಡಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಯತ್ನ ಮುಂದುವರಿಸಿದರೂ ಸಾಧ್ಯವಾಗದಿದ್ದರಿಂದ ಪರಾರಿಯಾಗಿದ್ದಾರೆ.
ಭದ್ರತಾ ಸಿಬ್ಬಂದಿ ಆನಂದ ಪಾಟೀಲ್ ಪೊಲೀಸ್ ಕಂಟ್ರೋಲ್ ರೂಮ್ಗೆ ತಕ್ಷಣ ಮಾಹಿತಿ ನೀಡಿದ್ದಾನೆ. ಮಾಳಮಾರುತಿ ಪೊಲೀಸರು ಮಾಹಿತಿ ಪಡೆದು, ಪತ್ತೆಗೆ ಜಾಲ ಬೀಸಿದರೂ ಸುಳಿವು ಸಿಗಲಿಲ್ಲ. ದರೋಡೆಕೋರರು ಹಿಂದಿಯಲ್ಲಿ ಮಾತನಾಡುತ್ತಿದ್ದು, ವೃತ್ತಪರ ತಂಡವೇ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.