ಬೆಳಗಾವಿ: ತಾಲೂಕಿನ ಯಳ್ಳೂರು ಗ್ರಾಮದ ಮಹಾರಾಷ್ಟ್ರರಾಜ್ಯ ನಾಮಫಲಕದ ತೆರವು ಮತ್ತು ಎಂಇಎಸ್ ಪುಂಡಾಟಿಕೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಲು ಕನ್ನಡಪರ ಹೋರಾಟಗಾರರು ಕರೆದಿದ್ದ ಪತ್ರಿಕಾಗೋಷ್ಠಿಗೆ ಪೊಲೀಸರು ಅಡ್ಡಿ ಪಡಿಸಿದ ಘಟನೆ ಭಾನುವಾರ ನಗರದಲ್ಲಿ ನಡೆಯಿತು.
ಕನ್ನಡಪರ ಹೋರಾಟಗಾರರಾದ ಡಾ.ಸಿದ್ದನಗೌಡ ಪಾಟೀಲ, ರಾಘವೇಂದ್ರ ಜೋಶಿ, ಅಶೋಕ ಚಂದರಗಿ, ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿ ಕರೆದಿದ್ದರು. ಇದರ ಮಾಹಿತಿ ಪಡೆದ ಮಾರ್ಕೆಟ್ ಸಿಪಿಐ ಸಂಜೀವಕುಮಾರ ನೇತೃತ್ವದಲ್ಲಿ ಆಗಮಿಸಿದ ಪೊಲೀಸರ ತಂಡ, ಯಳ್ಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಜು.31 ರಿಂದ ಆಗಸ್ಟ್ 10ರವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಇದೆ. ಹೀಗಾಗಿ ಪತ್ರಿಕಾಗೋಷ್ಠಿ ನಡೆಸದಂತೆ ಸೂಚಿಸಿದರು.
ಇದರಿಂದ ಕೆರಳಿದ ಕನ್ನಡಪರ ಹೋರಾಟಗಾರರು, ನಾವು ಕನ್ನಡದ ನೆಲ, ಜಲ ಹಾಗೂ ಗಡಿ ಸಂರಕ್ಷಣೆಗಾಗಿ ಕಳೆದ 4 ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ಹಿಂದೆಯೂ ಬೆಳಗಾವಿಯಲ್ಲಿ ಎಂಇಎಸ್ ಪುಡಾಂಟಿಕೆಯಿಂದ ನಿಷೇಧಾಜ್ಞೆ, ಕರ್ಫ್ಯೂ, ಗೋಲಿಬಾರ್‌ಗಳು ನಡೆದ ಸಂದರ್ಭದಲ್ಲೂ ಕನ್ನಡ ಹೋರಾಟಗಾರರ ನಿಲವು ಸರ್ಕಾರಕ್ಕೆ ಮುಟ್ಟಿಸಲು ಯಾವುದೇ ರೀತಿ ಅಡ್ಡಿಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement