ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಸನ್ಮಾನ ಸ್ವೀಕರಿಸಿದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಸಲಹೆ
ಬೆಳಗಾವಿ: ವಿಜ್ಞಾನ ಮತ್ತು ತಂತ್ರಜ್ಞಾನಗಳೇ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲಿದ್ದು, ಹೊಸ ಸಂಶೋಧನೆಗಳಿಂದ ಭವಿಷ್ಯದಲ್ಲಿ ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲಿದೆ ಎಂದು ಭಾರತರತ್ನ ಖ್ಯಾತ ವಿಜ್ಞಾನಿ ಪ್ರೊ.ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಹೇಳಿದರು.
ಶುಕ್ರವಾರ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಜ್ಞಾನ ಸಂಗಮದ ಆವರಣದಲ್ಲಿ ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕಾಗಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,ಸದ್ಯ ಅಮೆರಿಕ, ಕೋರಿಯಾ, ಚೀನಾ ದೇಶದಲ್ಲಿ ಕ್ಷಿಪ್ರ ಗತಿಯಲ್ಲಿ ಸಂಶೋಧನೆ ನಡೆಯುತ್ತಿವೆ. ಇವು ಮಂಚೂಣಿ ರಾಷ್ಟ್ರಗಳಾಗಿವೆ. ಆದರೆ ಮುಂಬರುವ ದಿನಗಳಲ್ಲಿ ಭಾರತದ ಯುವಶಕ್ತಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಡೆಸಲಿರುವ ಸಂಶೋಧನೆಗಳಿಂದ ಭಾರತ ಬಲಿಷ್ಠವಾಗಲಿದೆ. ಯುವಶಕ್ತಿಯ ಮೇಲೆ ವಿಶ್ವಾಸವಿಡಬಹುದು. ಅವರೇ ದೇಶದ ಆಶಾಕಿರಣ ಎಂದರು.
ಭೌತಶಾಸ್ತ್ರವಿರಲಿ, ರಸಾಯನ ಶಾಸ್ತ್ರವಿರಲಿ, ಜೀವಶಾಸ್ತ್ರವಿರಲಿ, ನೀವು ವಿಜ್ಞಾನದ ಯಾವುದೇ ಪ್ರಕಾರಗಳಲ್ಲಿ ಅಧ್ಯಯನ ಮಾಡುತ್ತಿರಬಹುದು. ಆದರೂ ನೀವು ಇನ್ನಾವುದೇ ಕ್ಷೇತ್ರಗಳಲ್ಲೂ ಸಂಶೋಧನೆ ಕೈಗೊಳ್ಳಬಹುದು. ಮನುಷ್ಯನಿಗೆ ಏನಾದರೂ ಸಂಶೋಧನೆ ಮಾಡಬೇಕು, ಸಾಧನೆ ಮಾಡಬೇಕು ಎಂಬ ತುಡಿತವಿರಬೇಕು. ಕಠಿಣ ಪರಿಶ್ರಮ, ಬುದ್ಧಿಶಕ್ತಿ ಹಾಗೂ ಬದ್ಧತೆಯಿಂದ ಕೆಲಸ ಮಾಡಿದರೆ ತಮಗೆ ಆಸಕ್ತಿಯಿರುವ ಯಾವುದೇ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಮೂಲ ವಿಜ್ಞಾನದ ವಿವಿಧ ಮಜಲುಗಳ ಕುರಿತು ಮಾತನಾಡಿ, ವಿಶ್ವದ ಶ್ರೇಷ್ಠ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಜನೋಪಕಾರಿ ಸಂಶೋಧನೆ ಮುಖ್ಯ: ಸಂಶೋಧಕರು ಮಾನವೀಯತೆ, ಉದಾರತೆ ಹಾಗೂ ಸಂಪ್ರದಾಯವನ್ನು (ಏ್ಖಂಆಃಐಖಿಘ, ಎಊಃಊಖಕಖಐಖಿಘ ್ ಖಿಖಆಉಐಖಿಐಕಃ) ಮೈಗೂಡಿಸಿಕೊಳ್ಳಬೇಕು. ವಿನಾಶಕಾರಿ ಸಂಶೋಧನೆಗಳ ಬದಲಿಗೆ ಜನೋಪಕಾರಿ ಸಂಶೋಧನೆಗಳತ್ತ ಹೆಚ್ಚಿನ ಆದ್ಯತೆ ನೀಡಬೇಕು. ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಭೌತಶಾಸ್ತ್ರ ಸೇರಿದಂತೆ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಸಂಶೋಧನೆಗೆ ಅನುದಾನ, ಹಣವೊಂದೇ ಮುಖ್ಯವಲ್ಲ. ರಾಜ್ಯ, ಕೇಂದ್ರ ಸರ್ಕಾರ ಅನುದಾನ ನೀಡಲಿಲ್ಲ ಎಂದು ಸಂಶೋಧನೆ ಬಿಟ್ಟು ಕೈಕಟ್ಟಿ ಕುಳಿತಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಯಿಯೇ ನನಗೆ ಉತ್ತಮ ಶಿಕ್ಷಕಿ
ನನ್ನ್ನ ತಾಯಿಯೇ ನನಗೆ ಉತ್ತಮ ಶಿಕ್ಷಕಿಯಾಗಿದ್ದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣದವರೆಗೆ ತಮ್ಮನ್ನು ತಿದ್ದಿ ತಿಡಿ ಬೆಳೆಸಿದವರು ನನ್ನ ತಾಯಿ. ಅದಕ್ಕಾಗಿ ನನ್ನ ತಾಯಿಯೇ ನನಗೆ ಉತ್ತಮ ಶಿಕ್ಷಕಿಯಾಗಿದ್ದರು ಎಂದು ವಿಜ್ಞಾನಿ ಸಿಎನ್ಆರ್ ರಾವ್ ಭಾವ ಪರವಶರಾಗಿ ಮಾತನಾಡಿದರು.
ನೋಬೆಲ್ ದೊರೆಯಲಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಟಿಯು ಕುಲಪತಿ ಎಚ್.ಮಹೇಶ್ವರಪ್ಪ ಮಾತನಾಡಿ, ಭಾರತರತ್ನ್ನ ಸಿ.ಎನ್.ಆರ್ ರಾವ್ ಅವರಿಗೆ ದೇಶ-ವಿದೇಶಗಳ ಅನೇಕ ವಿವಿಗಳಿಂದ 60 ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಅದಕ್ಕಾಗಿ ಭಾರತರತ್ನ್ನ ಸಿಎನ್ಆರ್ ರಾವ್ಗೆ ನೋಬೆಲ್ ಪಾರಿತೋಷಕ ದೊರೆಯಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಭಾರತರತ್ನ್ನ ಸಿಎನ್ಆರ್ ರಾವ್ ದಂಪತಿಗಳನ್ನು ಸನ್ಮಾನಿಸಲಾಯಿತು.