'ಮೂಢನಂಬಿಕೆ ತಡೆ ಕಾಯ್ದೆ ಜಾರಿಯಾಗಲಿ'

Updated on: 

ಬೆಳಗಾವಿ: ಭಾನಾಮತಿ ಹೆಸರಿನಲ್ಲಿ ದೌರ್ಜನ್ಯ ಎಸಗುವುದು, ಭೂತ ಪ್ರೇತದ ಹೆಸರಿನಲ್ಲಿ ಹಿಂಸಿಸುವುದು, ಸಿಡಿ ಹಾಯುವುದು ಸೇರಿದಂತೆ ಎಲ್ಲವನ್ನ್ನು ಮೂಢನಂಬಿಕೆ ತಡೆ ಕಾಯ್ದೆಯಡಿ ತರಬೇಕು ಎಂದು  ಅಖಿಲ ಭಾರತ ಜನವಾದಿ ಮಹಿಳೆ ಸಂಘಟನೆ ಉಪಾಧ್ಯಕ್ಷೆ ಶ್ರೀಮತಿ ಕೆ.ನೀಲಾ ಹೇಳಿದರು.
ನಗರದ ಬಸವರಾಜ ಕಟ್ಟೀಮನಿ ಆವರಣದಲ್ಲಿ ಡಾ.ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಮೂಢನಂಬಿಕೆ ಸರ್ಕಾರಕ್ಕೆ ಸಲ್ಲಿಸಿರುವ ಕರಡು ಮಸೂದೆ ಕುರಿತು ಉಪನ್ಯಾಸ-ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೌಢ್ಯವನ್ನು ಬಿತ್ತುವುದಕ್ಕಾಗಿ ಒಂದು ಶಕ್ತಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದು, ಶ್ರೀಮಂತರು ಮತ್ತು ಬಡವರ ಮಧ್ಯೆಯಿರುವ ಕಂದಕವನ್ನು ಇನ್ನ್ನಷ್ಟು ವಿಸ್ತರಿಸುತ್ತಿದೆ. ಮೂಢನಂಬಿಕೆಯ ಲಾಭ ಪಡೆದು, ಅನೇಕರು ಭಾನಾಮತಿ ಹೆಸರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.
ಇದು ತತ್‌ಕ್ಷಣ ನಿಲ್ಲಬೇಕು. ರಾಜ್ಯದ ಯಾವುದೇ ಭಾಗದಲ್ಲಿ ನಡೆಯುವ ಸಿಡಿ ಹಾಯುವ ಸಂಪ್ರದಾಯವನ್ನು ರಾಜ್ಯ ಸರ್ಕಾರ ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿದರು. ಮೂಢನಂಬಿಕೆ ತಡೆ ಕಾಯ್ದೆ ಜಾರಿಗೆ ಬಂದರೇ ನಮ್ಮ ಕೈಗೆ ಒಂದು ಅಸ್ತ್ರ ಸಿಕ್ಕಂತಾಗುವುದು ಎಂದರು.
ಮಡೆಸ್ನ್ನಾನ, ಅಡ್ಡಪಲ್ಲಕ್ಕಿ ಉತ್ಸವಗಳು ಅಮಾನವೀಯ ಆಚರಣೆಗಳಾಗಿವೆ. ನಿಧಿಯ ಹೆಸರಿನಲ್ಲಿ ಮಕ್ಕಳನ್ನು ಬಲಿಕೊಡುವುದು, ಪ್ರಾಣಿಗಳನ್ನು ಬಲಿಕೊಡುವುದು, ಮಲಹೊರುವ ಪದ್ಧತಿ ಸೇರಿದಂತೆ ಅನೇಕ ಆಚರಣೆಗಳನ್ನು ರದ್ದುಗೊಳಿಸಬೇಕು ಎಂದರು. ಅನೇಕ ಚಾನೆಲ್‌ಗಳಲ್ಲಿ ರಾಶಿಚಕ್ರ, ವಾಸ್ತು ಸೇರಿದಂತೆ ಅನೇಕ ಮೂಢನಂಬಿಕೆಗಳನ್ನು ಬಿತ್ತುವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಬೇಕು ಎಂದರು.
ಪರಿಮಳ ವಿಜಯಕುಮಾರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲೆಯ ಅಂಧಶ್ರದ್ಧೆ ನಿರ್ಮೂಲನೆ ಸಮಿತಿ ಅಧ್ಯಕ್ಷ ರಾಮ ಆಪ್ಟೆ ಮೂಢನಂಬಿಕೆಯಿಂದ ಆಗುವ ಪರಿಣಾಮಗಳ ಕುರಿತು ಮಾತನಾಡಿದರು.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಎಂ.ಕಲಬುರ್ಗಿ ಅವರ ಸಮ್ಮುಖದಲ್ಲಿ ಮೂಢನಂಬಿಕೆ ಕರಡು ಮಸೂದೆಯನ್ನು ಪರಿಷ್ಕರಿಸಿ, ಅನುಷ್ಠಾನಗೊಳಿಸಬೇಕು ಎಂದು ಗೊತ್ತುವಳಿ ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಡಿ.ಎಸ್.ಚೌಗಲೆ, ಡಾ.ಚಂದ್ರಕಾಂತ ಕುಸನೂರ, ಡಾ.ಬಸವರಾಜ ಜಗಜಂಪಿ, ಜಿನದತ್ತ ದೇಸಾಯಿ ಪ್ರೊ. ರಾಮಕೃಷ್ಣ ಮರಾಠೆ ಮೊದಲಾದವರು ಇದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com