

-ಶ್ರೀಶೈಲ ಮಠದ
ಬೆಳಗಾವಿ: ಅಂತೂ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮೇಲೆ ಚಾಟಿ ಬೀಸಲು ಆರಂಭಿಸಿದೆ. ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡ ಕಾರ್ಖಾನೆಗಳ ಸಕ್ಕರೆ ದಾಸ್ತಾನು ಜಪ್ತು ಮಾಡಲು ಮುಂದಾಗಿದೆ. ಈಗಾಗಲೇ ಇಂಡಿಯ ಜಮಖಂಡಿ ಶುಗರ್ಸ್ ಗೋದಾಮಿಗೆ ಬೀಗಮುದ್ರೆ ಜಡಿದಿದ್ದ ಸರ್ಕಾರ ಬುಧವಾರ ಮತ್ತೆ ಮೂರು ಕಾರ್ಖಾನೆಗಳ ಸಕ್ಕರೆ ಗೋದಾಮಿಗೆ ಬೀಗ ಮುದ್ರೆ ಹಾಕಿದೆ.
ಬಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಜ್ಞಾನಯೋಗಿ ಶಿವಕುಮಾರ ಸ್ವಾಮೀಜಿ ಹಾಗೂ ಸಿಂದಗಿ ತಾಲೂಕಿನ ಮಲಘಾಣದ ಮನಾಲಿ ಸಕ್ಕರೆ ಕಾರ್ಖಾನೆ ಹಾಗೂ ಬೆಳಗಾವಿಯ ರಾಮದುರ್ಗದ ಶಿವಸಾಗರ ಸಕ್ಕರೆ ಕಾರ್ಖಾನೆಗಳು ಬೀಗ ಮುದ್ರೆಗೊಳಗಾಗಿರುವ ಕಾರ್ಖಾನೆಗಳು. ಇನ್ನೆರಡು ದಿನದಲ್ಲಿ ಇನ್ನಷ್ಟು ಕಾರ್ಖಾನೆಗಳ ಸಕ್ಕರೆ ಗೋದಾಮಿಗೆ ಬೀಗಮುದ್ರೆ ಬೀಳಲಿದೆ ಎನ್ನುವ ಸುಳಿವನ್ನು ಜಿಲ್ಲಾಡಳಿತ ನೀಡಿದೆ.
ಇದೀಗ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕಾರ್ಖಾನೆಗಳು ಸಕ್ಕರೆ ಮಾರಾಟಕ್ಕೆ ಮುಂದಾಗಿದ್ದು, ಅದೇ ಸಂದರ್ಭದಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದು ಕಾರ್ಖಾನೆಗಳನ್ನು ಕಂಗಾಲು ಮಾಡಿದೆ.
ಮುಖ್ಯವಾಗಿ ಸರ್ಕಾರ ಈಗ ಬೀಗಮುದ್ರೆ ಹಾಕಿರುವ ಸಕ್ಕರೆ ಕಾರ್ಖಾನೆಗಳು ರಾಜಕೀಯ ಧುರೀಣರಿಗೆ ಸೇರಿದ್ದು. ಇಂಡಿಯ ನಾದಕೆ.ಡಿ ಯಲ್ಲಿನ ಸಕ್ಕರೆ ಕಾರ್ಖಾನೆ ಶಾಸಕ, ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡರಿಗೆ ಸೇರಿದ್ದು. ರಾಮದುರ್ಗದಲ್ಲಿ ಬೀಗಮುದ್ರೆ ಹಾಕಿರುವ ಸಕ್ಕರೆ ಕಾರ್ಖಾನೆ ಕೇಂದ್ರದ ಮಾಜಿ ಸಚಿವರೊಬ್ಬರ ಅಳಿಯನಿಗೆ ಸೇರಿದ್ದು, ಮಾಜಿ ಶಾಸಕರೊಬ್ಬರು ನಿರ್ದೇಶಕರಾಗಿದ್ದಾರೆ. ಇನ್ನು ಜ್ಞಾನಯೋಗಿ ಶಿವಕುಮಾರ ಸ್ವಾಮೀಜಿ ಹಾಗೂ ಮನಾಲಿ ಸಕ್ಕರೆ ಕಾರ್ಖಾನೆಯೂ ರಾಜಕಾರಣಿಗಳದ್ದೆ.
ಬೀಗಮುದ್ರೆ ಹಾಕಿದ ಗೋದಾಮಿನ ಸಕ್ಕರೆಯನ್ನು ಸರ್ಕಾರ ಸದ್ಯ ಮುಟ್ಟುತ್ತಿಲ್ಲ. ಬಾಕಿ ಪಾವತಿಗೆ ಇನ್ನೂ ಕೆಲ ದಿನ ಅವಕಾಶ ನೀಡಲಾಗುತ್ತದೆ. ಆ ಬಳಿಕ ಸಕ್ಕರೆ ಮಾರಾಟ ಮಾಡಲಾಗುತ್ತದೆ. ರೈತರ ಬಿಲ್‌ನ ಮೊತ್ತ ಹೆಚ್ಚಾಗಿದ್ದಲ್ಲಿ ಸಕ್ಕರೆ ಕಾರ್ಖಾನೆಗಳ ಇನ್ನಿತರ ಆಸ್ತಿಯನ್ನೂ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಲಿದೆ.
ಯಾಕೆ ಈ ಕ್ರಮ?: ರಾಜ್ಯ ಸರ್ಕಾರ ಪ್ರತಿಟನ್ ಕಬ್ಬಿಗೆ ರು. 2500 ದರ ನಿಗದಿಪಡಿಸಿದೆ. ಹೆಚ್ಚುವರಿ ರು. 150 ಪ್ರೋತ್ಸಾಹದನ ಘೋಷಿಸಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಈ ದರ ನೀಡಲು ಸುತಾರಾಂ ಒಪ್ಪುತ್ತಿಲ್ಲ. ಕೇಂದ್ರ ಘೋಷಿಸಿರುವ ಎಫ್‌ಆರ್‌ಪಿ ದರವನ್ನೂ ನೀಡುತ್ತಿಲ್ಲ. ನ್ಯಾಯಾಲಯ ಕೂಡ ಕಾರ್ಖಾನೆಗಳಿಗೆ ಎಫ್‌ಆರ್‌ಪಿ ನೀಡುವಂತೆ ಸೂಚಿಸಿದೆ. ಕೇಂದ್ರದ ಎಫ್‌ಆರ್‌ಪಿ ದರದಂತೆ ಪ್ರತಿ ಟನ್‌ಗೆ 2100 ರು. ನೀಡಬೇಕು. ಅದನ್ನೂ ನೀಡದೆ ಕಾರ್ಖಾನೆಗಳು ರೈತರನ್ನು ವಂಚಿಸುತ್ತಿವೆ.
ನೋಟಿಸ್
ಬೆಳಗಾವಿ ಜಿಲ್ಲೆಯ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಸೌಭಾಗ್ಯ ಲಕ್ಷ್ಮಿ ಕಾರ್ಖಾನೆ, ಅಥಣಿ ಫಾರ್ಮರ್ಸ್, ರಾಮದುರ್ಗದ ಶಿವಸಾಗರ ಸಕ್ಕರೆ ಕಾರ್ಖಾನೆ, ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಲಾಗಿತ್ತು. ಅದೇ ರೀತಿ ಬಿಜಾಪುರ ಜಿಲ್ಲೆಯ ಮೂರು ಹಾಗೂ ಬಾಗಲಕೋಟೆ ಜಿಲ್ಲೆಯ ನಿರಾಣಿ ಶುಗರ್ಸ್, ಜಮಖಂಡಿ ಶುಗರ್ಸ್‌ಗೂ ನೊಟೀಸ್ ಜಾರಿ ಮಾಡಲಾಗಿತ್ತು. ವಿಶೇಷವೆಂದರೆ ಈ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರಭಾವಿ ರಾಜಕಾರಣಿಗಳ ಮಾಲೀಕತ್ವ, ನೇತೃತ್ವದಲ್ಲಿದೆ. ಇದರಲ್ಲಿ ಬಹುತೇಕರು ಶಾಸಕರು, ಮಾಜಿ ಸಚಿವರು.
177ಕೋಟಿ ಬಾಕಿ ಹಣ ಬಿಡುಗಡೆ
ಬೆಳಗಾವಿ: ರಾಜ್ಯದ ಕಬ್ಬು ಬೆಳೆಗಾರರಿಗೆ ಘೋಷಿಸಿದ್ದ ಪ್ರೋತ್ಸಾಹ ಧನದ ಕೊನೆಯ ಕಂತಿನ ಬಾಕಿ ಹಣ 177. 58 ಕೋಟಿಯನ್ನು ಸರ್ಕಾರ ಕೊನೆಗೂ ಬಿಡುಗಡೆ ಮಾಡಿದೆ. ಕಬ್ಬಿನ ಬಾಕಿ ಬಿಲ್ ಕಾರ್ಖಾನೆಯಿಂದ ಬಾರದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಕಬ್ಬು ಬೆಳೆಗಾರರಿಗೆ ಇದರಿಂದ ತುಸು ಸಮಾಧಾನ ತಂದಂತಾಗಿದೆ.
-ಶಿವಸಾಗರ ಸಕ್ಕರೆ ಕಾರ್ಖಾನೆಯ ಗೋದಾಮಿನಲ್ಲಿ ರು. 27 ಕೋಟಿ ಮೌಲ್ಯದ 90 ಸಾವಿರ ಕ್ವಿಂಟಲ್ ಸಕ್ಕರೆಯನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಕಂಡಿದೆ. ಈ ಸಕ್ಕರೆ ಕಾರ್ಖಾನೆ ರೈತರಿಗೆ ರು. 29 ಕೋಟಿ ಬಾಕಿ ನೀಡಬೇಕಿದೆ.
-ಸಕ್ಕರೆ ಕಾರ್ಖಾನೆಯ 24 ಕೋಟಿ ಮೌಲ್ಯದ ಸಕ್ಕರೆ ಗೋದಾಮನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಕಾರ್ಖಾನೆ ರೈತರಿಗೆ 2.89 ಕೋಟಿ ಬಾಕಿ ನೀಡಬೇಕಿದೆ.
-ಮನಾಲಿ ಸಕ್ಕರೆ ಕಾರ್ಖಾನೆ ರೈತರಿಗೆ 3.11 ಕೋಟಿ ಬಾಕಿ ನೀಡಬೇಕಿದ್ದು, 36 ಕೋಟಿ ಮೌಲ್ಯದ ಸಕ್ಕರೆ ವಶಕ್ಕೆ ತೆಗೆದುಕೊಳ್ಳಲಾಗಿದೆ.
Advertisement