ಬೆಳಗಾವಿ: ಶನಿವಾರ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಹಿಂದೂಸ್ತಾನ ಗಾಯಕ ಗಣಪತಿಭಟ್ ಹಾಸಣಗಿ ಅವರು ಪ್ರಸ್ತುತಪಡಿಸಿದ ಗಾಯನ ಕಾರ್ಯಕ್ರಮವು ಸಂಗೀತ ರಸಿಕರ ಮನಸೂರೆಗೊಂಡಿತು.
ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಪ್ರಾಚೀನ-ಆಧುನಿಕ ಭಾವಗೀತ ಗಾಯನದಲ್ಲಿ ಖ್ಯಾತ ಹಿಂದೂಸ್ತಾನ ಗಾಯಕ ಗಣಪತಿಭಟ್ ಹಾಸಣಗಿ ಅವರು ಪ್ರಾಚೀನ ಗಾಯನದಲ್ಲಿ ವಚನ ಸಾಹಿತ್ಯ, ದಾಸರ ಪದಗಳನ್ನು ಪ್ರಸ್ತುತ ಪಡಿಸಿ ಸಂಗೀತ ರಸಿಕರ ಮನಗೆದ್ದರು. ಅಲ್ಲದೆ, ಆಧುನಿಕ ಗಾಯನದಲ್ಲಿ ಬೇಂದ್ರೆ, ಕುವೆಂಪು ಹಾಗೂ ಕೆ.ಎಸ್. ನರಸಿಂಹಸ್ವಾಮಿ ಅವರ ಹಾಡುವ ಮೂಲಕ ಸಂಗೀತ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿಕೊಂಡರು. ಸುಮಾರು ಒಂದು ಗಂಟೆ ಕಾಲ ಅಧಿಕ ಹಿಂದೂಸ್ತಾನಿ ಗಾಯನದಲ್ಲಿ ಅಚ್ಚು ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಮಚ್ಚೆಗೆಗೆ ಪಾತ್ರರಾದರು.
ಗಾಯಕ ಗಣಪತಿಭಟ್ ಹಾಸಣಗಿ ಅವರ ಗಾಯನಕ್ಕೆ ಶ್ರೀಧರ ಮಾಡ್ರೆ-ತಬಲಾ, ಕಿರಣ ಹಾನಗಲ್ಲ ಹಾರ್ಮೋನಿಯ್ಂ ಹಾಗೂ ಬೆಳಗಾವಿಯವಾರದ ಸಾಬನ್ನವರ ಸಹೋದರರು ಸಾಥ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ, ಕಸಾಪ ಮಾಜಿ ಅಧ್ಯಕ್ಷ ಡಾ. ಬಸವರಾಜ ಜಗಜಂಪಿ, ಸಾಹಿತಿ ಡಾ. ರಾಮಕೃಷ್ಣ ಮರಾಠೆ, ವಿರ್ಮಶಕ ಶಾಮಸುಂದರ ಬಿದರಕುಂದಿ, ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಬಜಂತ್ರಿ ಮೊದಲಾದವರು ಇದ್ದರು. ಪ್ರತಿಷ್ಠಾನದ ಸದಸ್ಯ ಸಂಚಾಲಕ ಶಿರೀಷ ಜೋಶಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.