ಬೆಳಗಾವಿ: ಕಬ್ಬು ದರ ಬಿಕ್ಕಟ್ಟು ಪರಿಪರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜೂ. 2ರಂದು ಜಿಲ್ಲಾಧಿಕಾರಿ ಕಚೇರಿ ಎದುರು ರೈತರಿಂದ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ಸರ್ಕಾರ ನಿಗದಿಪಡಿಸಿದ ದರ ನೀಡಲು ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ರಾಜ್ಯದ ಸಚಿವರು ಹಾಗೂ ಶಾಸಕರ ಹಿಡಿತದಲ್ಲಿ ಬಹುತೇಕ ಕಾರ್ಖಾನೆಗಳಿವೆ. ಹಾಗಾಗಿ, ಸರ್ಕಾರ ಕಾರ್ಖಾನೆದಾರರ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಂದಾಗಿದ್ದರೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ರೈತರ ಪಾಲಿಗೆ ದುರ್ದೈವದ ಸಂಗತಿ. ರೈತರು ತಮ್ಮ ಹೋರಾಟ ಮುಂದುವರೆಸಿದ್ದಾರೆ. ದರ ಕೊಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.