ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 16
ಉತ್ತರ ಕರ್ನಾಟಕ ಸೇರಿದಂತೆ ನಾಡಿನ ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀಮೈಲಾರಲಿಂಗೇಶ್ವರ ಜಾತ್ರೆಗೆ ಫೆ. 17ರಂದು ರಥಸಪ್ತಮಿಯ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತಿದೆ.
ಭಾನುವಾರ ಬೆಳಗ್ಗೆ ರಥ ಸಪ್ತಮಿ ಶ್ರೀಮಾರ್ತಾಂಡ ಭೈರವನ ಡೆಂಕಣ ಮರಡಿ ಆರೋಹಣದ ಜೊತೆಗೆ ಕಡುಬಿನ ಕಾಳಗ ನಡೆಯಲಿದೆ. ಫೆ. 25ರಂದು ಭಾರತ ಹುಣ್ಣಿಮೆ, ಫೆ. 26 ಧ್ವಜಾರೋಹಣ ಮತ್ತು ತ್ರಿಶೂಲ ಪೂಜೆ ನಡೆಯುತ್ತದೆ. ಫೆ. 27 ಬುಧವಾರ ಪ್ರಾತಃಕಾಲ 5 ಗಂಟೆಗೆ ಶ್ರೀಸ್ವಾಮಿಯು ಮಲ್ಲಾಸುರನ ಸಂಹಾರಕ್ಕೆ ಡೆಂಕಣ ಮರಡಿಗೆ ಗುಪ್ತಮೌನ ಸವಾರಿ, ಸಂಜೆ 5. 30ಕ್ಕೆ ಶ್ರೀಗುರುಗಳ ಆಶೀರ್ವಾದದ ಬಳಿಕ ಡೆಂಕಣ ಮರಡಿಯಲ್ಲಿ ದೇವರವಾಣಿ ಎಂದೇ ನಂಬಲಾಗಿರುವ ಕಾರ್ಣಿಕೋತ್ಸವ ನಡೆಯಲಿದೆ.
ಫೆ. 28ರಂದು ಶ್ರೀಮೈಲಾರಲಿಂಗೇಶ್ವರ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು. ಸಂಜೆ 4.30ಕ್ಕೆ ಶ್ರೀಗುರುವಿನ ಆಶೀರ್ವಾದ ನಂತರ ಕಂಚಿವೀರರಿಂದ ಪವಾಡ ಮತ್ತು ಗೊರವರಿಂದ ಸರಪಳಿ ಪವಾಡಗಳು ನಡೆಯುತ್ತವೆ.
ಹಾಲು ಉಕ್ಕಿದತ್ತ ಹುಲುಸು: ಫೆ. 17ರಂದು ಮದ್ಯಾಹ್ನ 12 ಗಂಟೆಗೆ ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಲಿದೆ, ಭಕ್ತರು, ಅಕ್ಕಿ, ಬೆಲ್ಲ ಮತ್ತು ದವಸ ಧಾನ್ಯಗಳನ್ನು ತಂದು ದೇವರಿಗೆ ಅರ್ಪಿಸುತ್ತಾರೆ. ಆಕಳು ಸಗಣಿ ಕುಳ್ಳುಗಳಿಂದ ದೇವರ ಸನ್ನಿದಿಯಲ್ಲಿ ಹಾಲು ಕಾಯಿಸುತ್ತಾರೆ. ಅದು ಉಕ್ಕಿ ಯಾವ ದಿಕ್ಕಿಗೆ ಹರಿಯುತ್ತದೋ ಅಲ್ಲಿ ಮುಂದಿನ ವರ್ಷ ಮಳೆ-ಬೆಳೆ ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರದ್ದು.
ಶುಭ ನುಡಿಯೇ ಕಾರ್ಣಿಕ: ಮಣಿಕಾಚೂಲ ಪರ್ವತದಲ್ಲಿ ಅಡಗಿದ್ದ ಅಸುರರನ್ನು ಸಂಹಾರಿಸಿದ ದ್ಯೋತಕವಾಗಿ ಸಿಡಿಮದ್ದುಗಳನ್ನು ಸುಡುವ ಮೂಲಕ ಭಕ್ತರು ಸಂಭ್ರಮಿಸುತ್ತಾರೆ. ವಿಜಯೋತ್ಸವ ಆಚರಣೆ ಮಾಡುತ್ತಾರೆ, ಅಂದು ಬಂದ ಭಕ್ತರಿಗೆ ಶುಭ ನುಡಿ ಹೇಳಬೇಕೆಂಬ ನಂಬಿಕೆಯ ಫಲವಾಗಿ ಡೆಂಕಣ ಮರಡಿಯಲ್ಲಿ ಫೆ. 27 ಬುಧವಾರ ಕಾರ್ಣಿಕೋತ್ಸವದಲ್ಲಿ ಶುಭ ನುಡಿಯನ್ನು ಗ್ವಾರಪ್ಪ ಹೇಳುತ್ತಾನೆ.
ರಥ ಸಪ್ತಮಿಯ ದಿನದಿಂದ ಗ್ವಾರಪ್ಪನು ಅಸುರರನ್ನು ಸಂಹಾರ ಮಾಡಿದ ಡೆಂಕಣ ಮರಡಿಯಲ್ಲಿ 11 ದಿನಗಳ ಕಾಲ ಉಪವಾಸ ವ್ರತಾಚರಣೆ ಮಾಡುತ್ತಾನೆ. ಕೊನೆ ದಿನವಾದ ಫೆ. 27ರ ಸಂಜೆ 5.30ಕ್ಕೆ ಬಿಲ್ಲನ್ನೇರಿ ಎಲ್ಲ ದಿಕ್ಕುನ್ನೂ ನೋಡುತ್ತಾ ಕಾರ್ಣಿಕ ನುಡಿಯುತ್ತಾನೆ.
ಕಡುಬಿನ ಕಾಳಗ: ಡೆಂಕಣ ಮರಡಿಯಲ್ಲಿರುವ ಹೆಗ್ಗಪ್ಪನ ವಾಸ ಸ್ಥಾನಕ್ಕೆ ಉತ್ಸವ ತೆರಳುತ್ತದೆ. ಅಲ್ಲಿಗೆ ಭಕ್ತರು ತಂದಿರುವ ಗಟ್ಟಿಯಾದ ಕಡುಬುಗಳಿಂದ ಹೊಡೆದುಕೊಳ್ಳುವುದೇ ಕಡುಬಿನ ಕಾಳಗ. ಫೆ. 28 ರಂದು ದೇವಸ್ಥಾನದ ಆವರಣದಲ್ಲಿ ಕಂಚಿ ವೀರರ ಪವಾಡ ಮತ್ತು ಗೊರವರ ಸರಪಳಿ ಪವಾಡಗಳು ಭಕ್ತರಲ್ಲಿ ರೋಮಾಂಚನ ಮೂಡಿಸುತ್ತವೆ.
ಜನಪದ ಸೊಗಡು: ಮೈಲಾರಲಿಂಗೇಶ್ವರ ಜಾತ್ರೆ ಸಂಪೂರ್ಣವಾಗಿ ಗ್ರಾಮೀಣ ಜನಪದ ಶೈಲಿ ಸೊಗಡು ಹೊಂದಿರುವ ಅತೀ ಅಪರೂಪದ ಜಾತ್ರೆಯಾಗಿದ್ದು, ಗೊರವರು, ದೋಣಿ, ಗಂಟೆ, ತ್ರಿಶೂಲ, ಭಂಡಾರ ಸೇರಿದಂತೆ ಉಣ್ಣೆಯ ಅಂಗಿಯನ್ನು ತೊಡುತ್ತಾರೆ. ಜೊತೆಗೆ ಮೈಲಾರಲಿಂಗನ ಪೌರಾಣಿಕ ಹಿನ್ನೆಲೆಯನ್ನು ಪದಗಳ ಮೂಲಕ ಹಾಡಿ ಹೊಗಳುತ್ತಾರೆ.
ಇವುಗಳು ಇಂದಿಗೂ ಗೊರವರ ಪದಗಳು ಎಂದೇ ಖ್ಯಾತಿ ಪಡೆದಿವೆ. ನಾಡಿನ ವಿವಿಧ ಭಾಗಗಳಿದೆ ಈ ಜಾತ್ರೆ ಲಂಕ್ಷಾಂತರ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಕಾರ್ಯಕ್ರಮ ವಿವರ...
ೂ ಫೆ. 17ರಂದು ಬೆಳಗ್ಗೆ ರಥ ಸಪ್ತಮಿ ಶ್ರೀಮಾರ್ತಾಂಡ ಭೈರವನ ಡೆಂಕಣ ಮರಡಿ ಆರೋಹಣ, ಕಡುಬಿನ ಕಾಳಗ ನಡೆಯಲಿದೆ.
ೂ ಫೆ. 25ರಂದು ಭಾರತ ಹುಣ್ಣಿಮೆ, ಫೆ. 26 ಧ್ವಜಾರೋಹಣ ಮತ್ತು ತ್ರಿಶೂಲ ಪೂಜೆ ನಡೆಯುತ್ತದೆ.
ೂ ಫೆ. 27ರಂದು ಪ್ರಾತಃಕಾಲ 5 ಗಂಟೆಗೆ ಶ್ರೀ ಸ್ವಾಮಿಯು ಮಲ್ಲಾಸುರನ ಸಂಹಾರಕ್ಕೆ ಡೆಂಕಣ ಮರಡಿಗೆ ಗುಪ್ತ-ಮೌನ ಸವಾರಿ, ಸಂಜೆ 5.30ಕ್ಕೆ ಶ್ರೀಗುರುಗಳ ಆಶೀರ್ವಾದದ ಬಳಿಕ ಡೆಂಕಣ ಮರಡಿಯಲ್ಲಿ ಕಾರ್ಣಿಕೋತ್ಸವ ನಡೆಯಲಿದೆ.
ೂ ಫೆ. 28ರಂದು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು. ಸಂಜೆ 4.30ಕ್ಕೆ ಶ್ರೀಗುರುವಿನ ಆಶೀರ್ವಾದ, ಅನಂತರ ಕಂಚಿವೀರರಿಂದ ಪವಾಡ ಮತ್ತು ಗೊರವರಿಂದ ಸರಪಳಿ ಪವಾಡಗಳು ನಡೆಯುತ್ತವೆ.