ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 30
ರಾಜ್ಯದಲ್ಲಿ ಕೆಲವೇ ತಾಲೂಕುಗಳ ಹಳ್ಳಿಗಳಿಗೆ ಮಾತ್ರ 24 ಗಂಟೆ ವಿದ್ಯುತ್ ನೀಡುವ ನಿರಂತರ ಜ್ಯೋತಿ ವಿನೂತನ ರೈತಪರ ಯೋಜನೆಯನ್ನು ಹಿಂದಿನ ಸರ್ಕಾರ ರೂಪಿಸಿತ್ತು. ಅದರಂತೆ ಕೂಡ್ಲಿಗಿ ತಾಲೂಕಿನಲ್ಲಿ ನಿರಂತರ ಜ್ಯೋತಿ ಯೋಜನೆ ಕಾರ್ಯಾರೂಪಕ್ಕೂ ಬಂತು. ಆದರೆ, ಕಾಮಗಾರಿಯಲ್ಲಿನ ಸಣ್ಣಪುಟ್ಟ ಲೋಪದೋಷಗಳಿಂದಾಗಿ ಈಗ ವಿದ್ಯುತ್ ಅವಘಡಗಳು ನಿರಂತರ ನಡೆಯುತ್ತಿವೆ. ಸಮಸ್ಯೆ ಹೇಳಿಕೊಳ್ಳೋಣವೆಂದರೆ ಕೂಡ್ಲಿಗಿಯಲ್ಲಿ ಕಚೇರಿಯೇ ಇಲ್ಲದಿರುವುದು ದುರಂತದ ಸಂಗತಿ.
ಅಧಿಕಾರಿಗಳೇ ಇಲ್ಲ: ನಿರಂತರ ಜ್ಯೋತಿ ಯೋಜನೆ ನಿಜಕ್ಕೂ ರೈತಪರ ಯೋಜನೆಯಾಗಿದ್ದರೂ ಅನುಷ್ಠಾನಗೊಳಿಸುವಾಗ ಮಾಡಿದ ಸಣ್ಣ-ಪುಟ್ಟ ಎಡವಟ್ಟುಗಳಿಂದ ಈಗ ರೈತರು ಕೈ ಕೈ ಹಿಸುಕಿಕೊಳ್ಳಬೇಕಾದ ಪ್ರಸಂಗ ಬಂದಿದೆ. 2 ತಿಂಗಳಲ್ಲಿ 7 ವಿದ್ಯುತ್ ಅಪಘಾತಗಳು ನಡೆದಿದ್ದು, ಕೊಟ್ಟೂರು ಹೋಬಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ ತಾಲೂಕಿನಲ್ಲಿ ನಾಲ್ವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಇಬ್ಬರು ಜೆಸ್ಕಾಂ ನೌಕರರೇ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ನಿರಂತರ ಜ್ಯೋತಿ ಕಾಮಗಾರಿಯ ಲೋಪದೋಷಗಳಿಂದ ಇಷ್ಟೆಲ್ಲ ಜೀವಹಾನಿಯಾಗಿದ್ದರೂ ಈ ಬಗ್ಗೆ ರೈತರು ತಮ್ಮ ನೋವುಗಳನ್ನು ಹೇಳಿಕೊಳ್ಳಲು ಹೋದರೆ ಕೂಡ್ಲಿಗಿಯಲ್ಲಿ ಜೆಸ್ಕಾಂ ಕಚೇರಿಯಲ್ಲಿ ನಿರಂತರ ಯೋಜನೆ ಅಧಿಕಾರಿಗಳೇ ಇಲ್ಲ.
ಕಳಪೆ ಇನ್ಸುಲೇಟರ್: ರೈತಪರ ಯೋಜನೆ ಕಾರ್ಯಗತವಾಗಿದ್ದರೂ ರೈತರಿಗೆ 24 ತಾಸು ವಿದ್ಯುತ್ ಸಿಗಬೇಕಿತ್ತು. ಆದರೆ, ವಿದ್ಯುತ್ ಯಾವಾಗ ಬರುತ್ತೋ ಯಾವಾಗ ಹೋಗುತ್ತೋ ಗೊತ್ತೇ ಆಗುವುದಿಲ್ಲ. ಯಾಕೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ಕೇಳಿದರೆ ಹೆಸರೇಳದ ಜೆಸ್ಕಾಂ ಲೈನ್ಮನ್ಗಳು ನಿರಂತರ ಜ್ಯೋತಿ ಯೋಜನೆಯಲ್ಲಿ ತಾಲೂಕಿನ ಹಳ್ಳಿಗಳಿಗೆ ಪ್ರತ್ಯೇಕ ವಿದ್ಯುತ್ ಲೈನ್ಗಳನ್ನು ಹಾಕಲಾಗಿದೆ. ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ತಂತಿ ಜೋಡಿಸುವ ವಿದ್ಯುತ್ ಇನ್ಸುಲೇಟರ್ಗಳು ಕಳಪೆಯಾಗಿವೆ. ಹೀಗಾಗಿ ವಿದ್ಯುತ್ ಲೈನ್ನಲ್ಲಿ ಆಗಾಗ್ಗೆ ದೋಷ ಬರುತ್ತದೆ.
ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗುತ್ತಿದೆ ಎಂದು ಯೋಜನೆಯ ಎಡವಟ್ಟುಗಳ ಬಗ್ಗೆ ತಿಳಿಸುತ್ತಾರೆ. ಸರ್ಕಾರವೇನೋ ಉತ್ತಮ ಯೋಜನೆ ಜಾರಿಗೆ ತಂದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ತಾಲೂಕಿನಲ್ಲಿ ಹಳ್ಳಿ ಹಿಡಿಯುತ್ತಿದ್ದು, ರೈತರ, ಜನತೆಯ ಜೀವದ ಜತೆಗೆ ಚೆಲ್ಲಾಟವಾಡುತ್ತಿದೆ.
ನಿರಂತರ ಯೋಜನೆ ಕಾಮಗಾರಿ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ. ಏನೇ ಸಮಸ್ಯೆ ತಕರಾರು ಇದ್ದರೆ ಹೊಸಪೇಟೆಯಲ್ಲಿಯ ಯೋಜನೆ ಕಚೇರಿಗೆ ಹೋಗಬೇಕಿದೆ. ಮಳೆ, ಗಾಳಿ ಬಂದಾಗ ವಿದ್ಯುತ್ ಮಾರ್ಗಗಳಲ್ಲಿ ತೊಂದರೆ ಉಂಟಾಗುತ್ತದೆ. ಹೀಗಾಗಿ ಅಂಥ ಸಮಯದಲ್ಲಿ ಹಳ್ಳಿಗಳಲ್ಲಿ ಕತ್ತಲು ಆಗಿರಬಹುದು. ಆದರೆ, ನಮ್ಮ ಇಲಾಖೆ ನಿಯಮಗಳಂತೆ ನಿರಂತರ ಜ್ಯೋತಿ ಹಾಗೂ ಇತರೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಸಮಸ್ಯೆ ಇದ್ದಲ್ಲಿ ತಕ್ಷಣ ಗಮನಿಸಿ, ಸರಿಪಡಿಸಲಾಗುವುದು.
- ಉಮಾಮಹೇಶ್ವರ, ಕೂಡ್ಲಿಗಿ ಜೆಸ್ಕಾಂ ಎಇಇ
ನಿರಂತರ ಯೋಜನೆ ಕಾಮಗಾರಿಯಲ್ಲಿ ಕಳಪೆ ವಿದ್ಯುತ್ ಸಲಕರಣೆ ಬಳಕೆ ಹಾಗೂ ವಿದ್ಯುತ್ ಕಂಬಗಳನ್ನು ಸೂಕ್ತವಾಗಿ ಆಳಕ್ಕೆ ಹೂಳದಿದ್ದರಿಂದ ಸ್ವಲ್ಪ ಮಳೆ ಗಾಳಿ ಬಂದರೆ ಕಂಬ ಬೀಳುತ್ತವೆ. ಹೀಗಾಗಿ ಯೋಜನೆ ರೈತರಿಗೆ ವರವಾಗುವ ಬದಲು ಶಾಪವಾಗಿದೆ.
- ಬಸವರಾಜ, ಕಕ್ಕುಪ್ಪಿ ಗ್ರಾಮ ರೈತ